ADVERTISEMENT

ಚೀನಾ ಜಿಡಿಪಿ ಗುರಿ ಶೇ 5ಕ್ಕೆ ನಿಗದಿ

ಪಿಟಿಐ
Published 5 ಮಾರ್ಚ್ 2024, 15:26 IST
Last Updated 5 ಮಾರ್ಚ್ 2024, 15:26 IST
ಷಿ ಜಿನ್‌ಪಿಂಗ್‌
ಷಿ ಜಿನ್‌ಪಿಂಗ್‌   

ಬೀಜಿಂಗ್‌: ಚೀನಾವು 2024ನೇ ಸಾಲಿಗೆ ಆರ್ಥಿಕ ಬೆಳವಣಿಗೆ ದರವನ್ನು (ಜಿಡಿಪಿ) ಶೇ 5ಕ್ಕೆ ನಿಗದಿಪಡಿಸಿದೆ.

ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಮಂದಗತಿಯಲ್ಲಿದ್ದು, ನಿರುದ್ಯೋಗದ ಪ್ರಮಾಣ ಹೆಚ್ಚುತ್ತಿದೆ. ಈ ನಡುವೆಯೇ 1.2 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ಭರವಸೆಯೊಂದಿಗೆ ಈ ಗುರಿ ನಿಗದಿಪಡಿಸಲಾಗಿದೆ. 

ಚೀನಾ ಪ್ರಧಾನಿ ಲೀ ಕಿಯಾಂಗ್‌ ಮಂಗಳವಾರ ನಡೆದ ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ನ (ಎನ್‌ಪಿಸಿ) ವಾರ್ಷಿಕ ಅಧಿವೇಶನದಲ್ಲಿ ಮಂಡಿಸಿದ ವರದಿಯಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದೆ. ಈ ವರ್ಷ ನಗರ ಪ್ರದೇಶದಲ್ಲಿನ ನಿರುದ್ಯೋಗ ದರವನ್ನು ಶೇ 5.5ರ ಮಿತಿಯಲ್ಲಿಯೇ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ.

ADVERTISEMENT

ಒಂದು ವಾರ ಕಾಲ ನಡೆಯುವ ಅಧಿವೇಶನದಲ್ಲಿ ಅಧ್ಯಕ್ಷ ಷಿ ಜಿನ್‌ಪಿಂಗ್‌ ಸೇರಿದಂತೆ ಎರಡು ಸಾವಿರ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. 2023ರಲ್ಲಿ ಜಿಡಿಪಿಯು ಶೇ 5.2ರಷ್ಟು ಪ್ರಗತಿ ಕಂಡಿತ್ತು. ಚೀನಾವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೆ, ಕೋವಿಡ್‌ ಸಾಂಕ್ರಾಮಿಕದ ಬಳಿಕ ಆರ್ಥಿಕ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.