ADVERTISEMENT

ಉರ್ಜಿತ್‌ ಪಟೇಲ್‌ಗೆ ಷೋಕಾಸ್‌ ನೋಟಿಸ್‌

ಸುಸ್ತಿದಾರರ ಹೆಸರು ಬಹಿರಂಗಪಡಿಸದಿರುವುದು

ಪಿಟಿಐ
Published 5 ನವೆಂಬರ್ 2018, 20:00 IST
Last Updated 5 ನವೆಂಬರ್ 2018, 20:00 IST
ಉರ್ಜಿತ್‌ ಪಟೇಲ್‌
ಉರ್ಜಿತ್‌ ಪಟೇಲ್‌   

ನವದೆಹಲಿ: ಉದ್ದೇಶ ಪೂರ್ವಕ ಸುಸ್ತಿದಾರರ ಹೆಸರು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಆದೇಶ ಗೌರವಿಸದ ಕಾರಣಕ್ಕೆ ಕೇಂದ್ರ ಮಾಹಿತಿ ಆಯೋಗವು (ಸಿಐಸಿ), ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ವಸೂಲಾಗದ ಸಾಲಗಳ ಬಗ್ಗೆ ಆರ್‌ಬಿಐನ ಹಿಂದಿನ ಗವರ್ನರ್‌ ರಘುರಾಂ ರಾಜನ್‌ ಅವರು ಬರೆದಿರುವ ಪತ್ರವನ್ನು ಬಹಿರಂಗಪಡಿಸು
ವಂತೆಯೂ ‘ಸಿಐಸಿ’ಯು, ಪ್ರಧಾನಿ ಕಚೇರಿ (ಪಿಎಂಒ), ಹಣಕಾಸು ಸಚಿವಾಲಯ ಮತ್ತು ಆರ್‌ಬಿಐಗೆ ಕೇಳಿಕೊಂಡಿದೆ.

ಸುಪ್ರೀಂಕೋರ್ಟ್‌ನ ಆದೇಶದ ಹೊರತಾಗಿಯೂ ₹ 50 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲ ಪಡೆದ ಉದ್ದೇಶಪೂರ್ವಕ ಸುಸ್ತಿದಾರರ ಹೆಸರುಗಳನ್ನು ಬಹಿರಂಗಪಡಿಸದ ಮತ್ತು ಕೋರ್ಟ್‌ ಆದೇಶ ಗೌರವಿಸಿದ ಕಾರಣಕ್ಕೆ ನಿಮಗೆ ಗರಿಷ್ಠ ಮೊತ್ತದ ದಂಡವನ್ನೇಕೆ ವಿಧಿಸಬಾರದು ? ಇದಕ್ಕೆ ವಿವರಣೆ ನೀಡಿ ಎಂದು ‘ಸಿಐಸಿ’,ಉರ್ಜಿತ್‌ ಪಟೇಲ್‌ ಅವರನ್ನು ಕೇಳಿದೆ.

ADVERTISEMENT

ಉದ್ದೇಶಪೂರ್ವಕ ಸುಸ್ತಿದಾರರ ಹೆಸರುಗಳನ್ನು ಆರ್‌ಬಿಐ ಬಹಿರಂಗಪಡಿಸಬೇಕು ಎಂದು ಹಿಂದಿನ ಮಾಹಿತಿ ಆಯುಕ್ತ ಶೈಲೇಂದ್ರ ಗಾಂಧಿ ಅವರು ಕೈಗೊಂಡಿದ್ದ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿತ್ತು.

ಮಾಹಿತಿ ಹಕ್ಕು ಕಾಯ್ದೆಗೆ (ಆರ್‌ಟಿಐ) ಸಂಬಂಧಿಸಿದಂತೆ ಆರ್‌ಬಿಐ ಪ್ರತಿಪಾದಿಸುವ ಧೋರಣೆಗೂ, ಗವರ್ನರ್‌ ಮತ್ತು ಡೆಪ್ಯುಟಿ ಗವರ್ನರ್‌ ಹೇಳಿಕೆಗಳಿಗೂ ತಾಳೆಯಾಗುತ್ತಿಲ್ಲ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.

‘ಕೋರ್ಟ್‌ ಆದೇಶ ಪಾಲಿಸದ ಕಾರಣಕ್ಕೆ ಇದೇ 16ರ ಒಳಗೆ ಗರಿಷ್ಠ ದಂಡವನ್ನೇಕೆ ವಿಧಿಸಬಾರದು ಎಂದು ಪಟೇಲ್‌ ಅವರಿಗೆ ನೀಡಿದ ನೋಟಿಸ್‌ನಲ್ಲಿ ಕೇಳಲಾಗಿದೆ’ ಎಂದು ಮಾಹಿತಿ ಆಯುಕ್ತ ಶ್ರೀಧರ್‌ ಆಚಾರ್ಯುಲು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.