
ನವದೆಹಲಿ: ತಂಬಾಕಿನ ಉತ್ಪನ್ನಗಳಿಗೆ ಹೆಚ್ಚುವರಿಯಾಗಿ ಸುಂಕ ವಿಧಿಸಲು ಅವಕಾಶ ಕಲ್ಪಿಸುವ ನಿಯಮವನ್ನು ಕೇಂದ್ರ ಸರ್ಕಾರವು ಗುರುವಾರ ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಇದರ ಪರಿಣಾಮವಾಗಿ ಸಿಗರೇಟ್ ಮತ್ತು ಗುಟ್ಕಾ ಬೆಲೆಯು ಫೆಬ್ರುವರಿ 1ರಿಂದ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
ತಂಬಾಕಿನ ಉತ್ಪನ್ನಗಳಿಗೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಶೇಕಡ 40ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಈ ಪ್ರಮಾಣದ ತೆರಿಗೆಯ ಮೇಲೆ ಹೆಚ್ಚುವರಿಯಾಗಿ ಸುಂಕ ವಿಧಿಸಲು ಗುರುವಾರ ಅಧಿಸೂಚನೆಯಲ್ಲಿ ಪ್ರಕಟಗೊಂಡ ನಿಯಮಗಳು ಅವಕಾಶ ಮಾಡಿಕೊಡುತ್ತವೆ.
ಈಗ ₹18ಕ್ಕೆ ಲಭ್ಯವಿರುವ ಸಿಗರೇಟಿನ ಬೆಲೆಯು ಫೆಬ್ರುವರಿಯಿಂದ ₹21 ಅಥವಾ ₹22ಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ. ಹೆಚ್ಚುವರಿ ಸುಂಕವನ್ನು ಸಿಗರೇಟು ತಯಾರಿಕಾ ಕಂಪನಿಗಳು ಹೇಗೆ, ಯಾವ ಪ್ರಮಾಣದಲ್ಲಿ ಗ್ರಾಹಕರಿಗೆ ವರ್ಗಾಯಿಸಲಿವೆ ಎಂಬುದರ ಆಧಾರದಲ್ಲಿ ಬೆಲೆ ಏರಿಕೆ ನಿರ್ಧಾರವಾಗಲಿದೆ.
ಹೊಸ ವ್ಯವಸ್ಥೆಯ ಅಡಿಯಲ್ಲಿ ಪ್ರತಿ 1,000 ಸಿಗರೇಟುಗಳಿಗೆ ಹೆಚ್ಚುವರಿಯಾಗಿ ₹2,050ರಿಂದ ₹8,500ರವರೆಗೆ ಸುಂಕ ವಿಧಿಸಲಾಗುತ್ತದೆ. ಸುಂಕದ ಪ್ರಮಾಣವು ಸಿಗರೇಟಿನ ಉದ್ದ ಹಾಗೂ ಅದಕ್ಕೆ ಫಿಲ್ಟರ್ ಇದೆಯೇ ಎಂಬುದನ್ನು ಆಧರಿಸಿ ನಿರ್ಧಾರವಾಗಲಿದೆ.
ಕೇಂದ್ರ ಸರ್ಕಾರವು ಹೊಸ ನಿಯಮವನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದ ನಂತರದಲ್ಲಿ ದೇಶದ ಪ್ರಮುಖ ಸಿಗರೇಟು ತಯಾರಿಕಾ ಕಂಪನಿಗಳ ಷೇರುಮೌಲ್ಯವು ಭಾರಿ ಪ್ರಮಾಣದಲ್ಲಿ ಕುಸಿದಿದೆ.
ಐಟಿಸಿ ಷೇರುಮೌಲ್ಯವು ಗುರುವಾರ ಶೇ 9.69ರಷ್ಟು ಕುಸಿದಿದೆ. ಗಾಡ್‌ಫ್ರೇ ಫಿಲಿಪ್ಸ್ ಕಂಪನಿಯ ಷೇರುಮೌಲ್ಯ ಶೇ 17.17ರಷ್ಟು ಕುಸಿದಿದೆ.
ತಂಬಾಕು ಸಂಬಂಧಿತ ಕಾಯಿಲೆಗಳಿಂದ ದೇಶದ ಮೇಲೆ ಆಗುವ ಆರ್ಥಿಕ ಹೊರೆಯು ವಾರ್ಷಿಕ ₹2.4 ಲಕ್ಷ ಕೋಟಿಗಿಂತ ಹೆಚ್ಚಾಗುವ ಅಂದಾಜು ಇದೆ. ಇಂತಹ ಸಂದರ್ಭದಲ್ಲಿ ಸಿಗರೇಟು ಬಹಳ ಅಗ್ಗವಾಗಬಾರದು ಎಂಬ ಉದ್ದೇಶದಿಂದ ಸುಂಕವನ್ನು ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ಬೇರೆ ಉತ್ಪನ್ನಗಳಿಗೆ ಹೋಲಿಸಿದರೆ ತಂಬಾಕಿನ ಮೇಲೆ ಭಾರಿ ಪ್ರಮಾಣದ ತೆರಿಗೆ ಇರಬೇಕು ಎಂಬ ಕೇಂದ್ರದ ನಿಲುವಿಗೆ ಇದು ಅನುಗುಣವಾಗಿದೆ ಎಂದು ಅದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.