ADVERTISEMENT

ಜಾಗತಿಕ ಸ್ಪರ್ಧಾತ್ಮಕ ಆರ್ಥಿಕತೆ ಸೂಚ್ಯಂಕ: 58ನೇ ಸ್ಥಾನದಲ್ಲಿ ಭಾರತ

ಪಿಟಿಐ
Published 17 ಅಕ್ಟೋಬರ್ 2018, 20:09 IST
Last Updated 17 ಅಕ್ಟೋಬರ್ 2018, 20:09 IST
   

ನವದೆಹಲಿ: ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿರುವ ಈ ವರ್ಷದ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತವು 58ನೆ ಸ್ಥಾನಕ್ಕೆ ಬಡ್ತಿ ಪಡೆದಿದೆ.

2017ರ ಸ್ಥಾನಕ್ಕೆ ಹೋಲಿಸಿದರೆ ಈ ಬಾರಿ ಭಾರತ 5 ಸ್ಥಾನಕ್ಕೆ ಮೇಲಕ್ಕೆ ಏರಿದೆ. ‘ಜಿ–20’ ದೇಶಗಳ ಪೈಕಿ ಭಾರತ ಗರಿಷ್ಠ ಗಳಿಕೆ ಕಂಡಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ವರದಿಯಲ್ಲಿ ತಿಳಿಸಲಾಗಿದೆ.

140 ದೇಶಗಳ ಪಟ್ಟಿಯಲ್ಲಿ ಅಮೆರಿಕವು ಮೊದಲ, ಸಿಂಗಪುರ (ದ್ವಿತೀಯ), ಜರ್ಮನಿ (ತೃತೀಯ), ಸ್ವಿಟ್ಜರ್ಲೆಂಡ್‌ (ನಾಲ್ಕನೆ) ಮತ್ತು ಜಪಾನ್‌ 5ನೇ ಸ್ಥಾನದಲ್ಲಿ ಇವೆ. ಜಾಗತಿಕ ಸ್ಪರ್ಧಾತ್ಮಕ ವರದಿಯಲ್ಲಿ 62 ಅಂಕಗಳೊಂದಿಗೆ ಭಾರತ 58 ಸ್ಥಾನಕ್ಕೆ ಏರಿದೆ. ಚೀನಾ 28ನೆ ಸ್ಥಾನದಲ್ಲಿ ಇದೆ.

ADVERTISEMENT

‘ಬ್ರಿಕ್ಸ್‌’ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿ ಇದೆ. ನಂತರದ ಸ್ಥಾನದಲ್ಲಿ ರಷ್ಯಾ, ಭಾರತ, ದಕ್ಷಿಣ ಆಫ್ರಿಕ ಮತ್ತು ಬ್ರೆಜಿಲ್‌ಗಳಿವೆ. ಭಾರತವು ದಕ್ಷಿಣ ಏಷ್ಯಾದ ಪ್ರಮುಖ ಆರ್ಥಿಕ ಚಾಲಕ ಶಕ್ತಿಯ ಸ್ಥಾನಮಾನ ಉಳಿಸಿಕೊಂಡಿದೆ.

ಆರೋಗ್ಯ, ಶಿಕ್ಷಣ ಮತ್ತು ಕೌಶಲ ಕ್ಷೇತ್ರಗಳನ್ನು ಹೊರತುಪಡಿಸಿ ಸ್ಪರ್ಧಾತ್ಮಕತೆಯ ಎಲ್ಲ ವಿಷಯಗಳಲ್ಲಿ ಭಾರತ ಮುಂಚೂಣಿಯಲ್ಲಿ ಇದೆ. ಶ್ರೀಲಂಕಾ ಗರಿಷ್ಠ ಮಟ್ಟದ ಜೀವಿತಾವಧಿ, ಸುಶಿಕ್ಷಿತ ದುಡಿಯುವ ವರ್ಗ ಹೊಂದಿದೆ. ಭಾರತ ಮತ್ತು ಶ್ರೀಲಂಕಾ ಅತ್ಯಂತ ದಕ್ಷ ಸ್ವರೂಪದ ಮೂಲಸೌಕರ್ಯ ವ್ಯವಸ್ಥೆಯನ್ನು ನೆಚ್ಚಿಕೊಂಡಿವೆ. ಭಾರತವು ಸಾರಿಗೆ ಮೂಲ ಸೌಕರ್ಯಗಳ ಮೇಲೆ ಹೆಚ್ಚಿನ ಬಂಡವಾಳ ತೊಡಗಿಸಿದೆ.

ಭಾರತವು ವಿಶಾಲ ಮಾರುಕಟ್ಟೆ ಗಾತ್ರ, ಸಂಶೋಧನಾ ಸಂಸ್ಥೆಗಳ ಗುಣಮಟ್ಟ ಮತ್ತು ವ್ಯವಹಾರ ಕುಶಲತೆ ವಿಷಯದಲ್ಲಿ ಸ್ಪರ್ಧಾತ್ಮಕ ಅನುಕೂಲತೆ ಹೊಂದಿದೆ.

ಭಾರತದಲ್ಲಿ ಕಾರ್ಮಿಕರ ಮಾರುಕಟ್ಟೆ ಅದರಲ್ಲೂ ವಿಶೇಷವಾಗಿ ಕಾರ್ಮಿಕರ ಹಕ್ಕುಗಳು, ಉತ್ಪನ್ನ ಮಾರುಕಟ್ಟೆ, ವಾಣಿಜ್ಯ ದರ ಮತ್ತು ವಿದ್ಯಾರ್ಥಿ – ಶಿಕ್ಷಕ ಅನುಪಾತ ವಿಷಯದಲ್ಲಿ ಸುಧಾರಣೆಗಳನ್ನು ತರುವ ಅಗತ್ಯ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ದೇಶವೊಂದರ ಆರ್ಥಿಕತೆಯ ಉತ್ಪಾದನಾ ಮಟ್ಟ ಮತ್ತು ದೀರ್ಘಾವಧಿ ಬೆಳವಣಿಗೆ ಪರಿಗಣಿಸಿ ಸ್ಪರ್ಧಾತ್ಮಕತೆ ನಿರ್ಧರಿಸಲಾಗುತ್ತಿದೆ. ಮೂಲಸೌಕರ್ಯ, ತಂತ್ರಜ್ಞಾನ ಸನ್ನದ್ಧತೆ, ಆರೋಗ್ಯ, ಶಿಕ್ಷಣ, ಹಣಕಾಸು ವ್ಯವಸ್ಥೆ, ಮಾರುಕಟ್ಟೆಯ ಗಾತ್ರ ಮತ್ತು ಸಂಶೋಧನೆಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.