ADVERTISEMENT

ಪೆಟ್ರೋಲ್: ಕೇಂದ್ರ, ರಾಜ್ಯಕ್ಕೆ ಗ್ರಾಹಕರು ಪಾವತಿಸುವ ತೆರಿಗೆಯೇ ಶೇ 275ರಷ್ಟು!

ಅನ್ನಪೂರ್ಣ ಸಿಂಗ್
Published 9 ಜೂನ್ 2020, 6:54 IST
Last Updated 9 ಜೂನ್ 2020, 6:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಳೆದ ಎರಡು ತಿಂಗಳುಗಳಲ್ಲಿ ಅಬಕಾರಿ ಸುಂಕದ ಹೆಚ್ಚಳದಿಂದಾಗಿ ಗ್ರಾಹಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರತಿ ಲೀಟರ್‌ ಪೆಟ್ರೋಲ್‌ಗೆ ಪಾವತಿಸುವ ತೆರಿಗೆಯ ಪ್ರಮಾಣ ಶೇ 275ರಷ್ಟಾಗಿದೆ. ಫೆಬ್ರುವರಿಯಲ್ಲಿ ಇದು ಶೇ 107ರಷ್ಟಿತ್ತು. ಪೆಟ್ರೋಲ್‌ನ ಮೂಲ ಬೆಲೆ ಕೇವಲ ₹18 ಆಗಿದೆ. ತೆರಿಗೆಗಳು ₹50ರ ಸನಿಹವಿದ್ದು, ಮಾರಾಟದ ವೇಳೆ ಬೆಲೆ ₹72 ತಲುಪಿದೆ.

ಡೀಸೆಲ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿರುವ ಸುಂಕದಿಂದಾಗಿ ಗ್ರಾಹಕರು ಮೂಲ ಬೆಲೆಯ ಶೇ 255ರಷ್ಟು ತೆರಿಗೆ ಪಾವತಿಸುವಂತಾಗಿದೆ. ಡೀಸೆಲ್‌ನ ಮೂಲ ದರ ₹18.50 ಇದೆ. ಮಾರಾಟದ ದರ ₹70ರಷ್ಟಿದೆ.

ಪ್ರತಿ ಲೀಟರ್‌ ಪೆಟ್ರೋಲ್‌ಗೆ ಅಬಕಾರಿ ಸುಂಕವು ₹33ರ ಸನಿಹವಿದ್ದರೆ ಡೀಸೆಲ್‌ಗೆ ₹32ರಷ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್‌ಗೆ ₹16ರಷ್ಟು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್‌) ವಿಧಿಸಲಾಗುತ್ತಿದೆ. ಎರಡೂ ತೆರಿಗೆಗಳು ಸೇರಿ ಮಾರಾಟದ ವೇಳೆಗಾಗುವಾಗ ಪೆಟ್ರೋಲ್‌ ದರ ₹72ರಷ್ಟಾಗುತ್ತಿದೆ. ಉಭಯ ತೆರಿಗೆಗಳ ಪ್ರಮಾಣವು ಪೆಟ್ರೋಲ್‌ ಪಂಪ್‌ಗಳಲ್ಲಿ ಗ್ರಾಹಕರು ಪ್ರತಿ ಲೀಟರ್‌ ಖರೀದಿ ವೇಳೆ ತೆರುವ ಒಟ್ಟು ಬೆಲೆಯ ಶೇ 69ರಷ್ಟಾಗುತ್ತದೆ. ಇಷ್ಟೊಂದು ಪ್ರಮಾಣದ ತೆರಿಗೆ ವಿಶ್ವದಲ್ಲೇ ಹೆಚ್ಚಿನದ್ದು.

ಅಮೆರಿಕದಲ್ಲಿ ಶೇ 19, ಜಪಾನ್‌ನಲ್ಲಿ ಶೇ 47, ಬ್ರಿಟನ್‌ನಲ್ಲಿ ಶೇ 62 ಮತ್ತು ಫ್ರಾನ್ಸ್‌ನಲ್ಲಿ ಶೇ 63ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಕಚ್ಚಾ ತೈಲ ಬೆಲೆಯ ಪೂರ್ತಿ ಲಾಭವನ್ನು ಸರ್ಕಾರವು ಎಂದಿಗೂ ಗ್ರಾಹಕರಿಗೆ ವರ್ಗಾಯಿಸಿಲ್ಲ ಎನ್ನುತ್ತದೆ ಬ್ರೊಕರೇಜ್ ಸಂಸ್ಥೆ ಕೇರ್ ರೇಟಿಂಗ್. ಏಪ್ರಿಲ್ 12ರಂದು ಕಚ್ಚಾ ತೈಲದ ಬೆಲೆಬ್ಯಾರೆಲ್‌ಗೆ 20 ಡಾಲರ್‌ಗಿಂತ ಕೆಳಗಿಳಿದಿದ್ದರೂ ಭಾರತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹70ರಷ್ಟಿತ್ತು.

ಜಾಗತಿಕ ಕಚ್ಚಾತೈಲದ ದರ ಕುಸಿತದ ಲಾಭ ಪಡೆದ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಎರಡು ಬಾರಿ ₹13ರ ವರೆಗೂ ಹೆಚ್ಚಿಸಿತ್ತು. ತೆರಿಗೆ ಹೆಚ್ಚಿಸಿದ ನಂತರ ಎರಡು ವಾರಗಳವರೆಗೆ ತೈಲ ಕಂಪನಿಗಳು ಗ್ರಾಹಕರಿಗೆ ಅದರ ಹೊರೆಯನ್ನು ವರ್ಗಾಯಿಸಿರಲಿಲ್ಲ. ಆದರೆ ಜೂನ್ 7 ಮತ್ತು 8ರಂದು ಪೆಟ್ರೋಲ್, ಡೀಸೆಲ್ ದರವನ್ನು ₹1.20ರಷ್ಟು ಏರಿಕೆ ಮಾಡಿವೆ. ಮಂಗಳವಾರ ಮತ್ತೆಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್‌ಗೆ ಕ್ರಮವಾಗಿ 54 ಪೈಸೆ ಮತ್ತು 58 ಪೈಸೆ ಏರಿಕೆಯಾಗಿದೆ.

ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಪ್ರತಿಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಕಚ್ಚಾ ತೈಲದ ದರ ಇಳಿಕೆಯಿಂದ ಸರ್ಕಾರಕ್ಕಷ್ಟೇ ಪ್ರಯೋಜನವಾಗುತ್ತಿದೆ. ಗ್ರಾಹಕರು ದುಬಾರಿ ಬೆಲೆ ತೆರಬೇಕಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.