ADVERTISEMENT

ಇಂದಿನಿಂದ ಫ್ರಿಜ್‌ ಅಗ್ಗ

ದರ ಕಡಿತದ ಪ್ರಯೋಜನ ಇಂದಿನಿಂದ ಗ್ರಾಹಕರಿಗೆ ವರ್ಗಾವಣೆ

ಪಿಟಿಐ
Published 26 ಜುಲೈ 2018, 19:30 IST
Last Updated 26 ಜುಲೈ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ಗೃಹೋಪಯೋಗಿ ಸಲಕರಣೆಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯು ಶೇ 10ರಷ್ಟು ಕಡಿಮೆ ಆಗಿರುವುದರ ಪ್ರಯೋಜನವನ್ನು ಬಳಕೆದಾರರಿಗೆ ವರ್ಗಾಯಿಸಲು ತಯಾರಕರು ಮುಂದಾಗಿದ್ದಾರೆ.

ಹೊಸ ದರಗಳು ಶುಕ್ರವಾರದಿಂದ ಜಾರಿಗೆ ಬರಲಿದ್ದು, ಫ್ರಿಜ್‌, ವಾಷಿಂಗ್‌ಮಷಿನ್, ವ್ಯಾಕುಂ ಕ್ಲೀನರ್‌ ಮತ್ತಿತರ ಸರಕುಗಳ ಬೆಲೆಗಳು ಶೇ 7 ರಿಂದ ಶೇ 8ರಷ್ಟು ಅಗ್ಗವಾಗಲಿವೆ.

‘ಜಿಎಸ್‌ಟಿ ದರ ಪರಿಷ್ಕರಣೆಯ ಒಟ್ಟಾರೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು. ಶೇ 28ರ ಜಿಎಸ್‌ಟಿ ದರವನ್ನು ಶೇ 18ಕ್ಕೆ ಇಳಿಸಿರುವುದು ಗೃಹೋಪಯೋಗಿ ಸಲಕರಣೆಗಳ ತಯಾರಿಕಾ ಉದ್ದಿಮೆಯ ಬೆಳವಣಿಗೆಗೆ ನೆರವಾಗಲಿದೆ’ ಎಂದು ಗೋದ್ರೇಜ್‌ ಅಪ್ಲೈಯನ್ಸಸ್‌ನ ವಹಿವಾಟು ಮುಖ್ಯಸ್ಥ ಕಮಲ್‌ ನಂದಿ ಅವರು ಹೇಳಿದ್ದಾರೆ.

ADVERTISEMENT

‘ದರ ಪರಿಷ್ಕರಣೆಯಿಂದಾಗಿ ಫ್ರಿಜ್‌ ಮತ್ತು ರೆಫ್ರಿಜರೇಟರ್‌ಗಳ ಬೆಲೆ ಇನ್ನಷ್ಟು ಕೈಗೆಟುಕಲಿದೆ. ಇದರಿಂದ ದೇಶದಾದ್ಯಂತ ಇವುಗಳ ಮಾರಾಟ ಹೆಚ್ಚಲಿದೆ. ಇದು ತಯಾರಿಕೆ ಹೆಚ್ಚಳಕ್ಕೆ ಕಾರಣವಾಗಿ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಹೇಳಿದ್ದಾರೆ.

‘ಜಿಎಸ್‌ಟಿ ಕಡಿತದ ಶೇ 100ರಷ್ಟು ಲಾಭವನ್ನು ಇದೇ 27ರಿಂದ ಗ್ರಾಹಕರಿಗೆ ವರ್ಗಾಯಿಸಲಾಗುವುದು. ಬೆಲೆ ಕಡಿತದ ಪ್ರಮಾಣವು ಶೇ 7 ರಿಂದ ಶೇ 8ರಷ್ಟು ಇರಲಿದೆ' ಎಂದು ಎಲ್‌ಜಿ ಇಂಡಿಯಾದ ವಹಿವಾಟು ಮುಖ್ಯಸ್ಥ ವಿಜಯ್‌ ಬಾಬು ಹೇಳಿದ್ದಾರೆ. ‘26 ಇಂಚಿನವರೆಗಿನ ಟೆಲಿವಿಷನ್‌ಗಳ ಮೇಲಿನ ತೆರಿಗೆ ಕಡಿತವು ಗ್ರಾಮೀಣ ಪ್ರದೇಶದಲ್ಲಿ ಮಾರಾಟಕ್ಕೆ ಉತ್ತೇಜನ ನೀಡಲಿದೆ’ ಎಂದು ಪ್ಯಾನಾಸೋನಿಕ್‌ ಇಂಡಿಯಾದ ಸಿಇಒ ಮನೀಷ್‌ ಶರ್ಮಾ ಹೇಳಿದ್ದಾರೆ.

*

ತೆರಿಗೆ ಕಡಿತವು ಮುಂಬರುವ ಹಬ್ಬದ ದಿನಗಳಲ್ಲಿ ವಹಿವಾಟು ಹೆಚ್ಚಳಕ್ಕೆ ಭಾರಿ ಕೊಡುಗೆ ನೀಡಲಿದೆ.
-ಮನೀಷ್‌ ಶರ್ಮಾ, ಪ್ಯಾನಾಸೋನಿಕ್‌ ಇಂಡಿಯಾದ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.