ADVERTISEMENT

ಸೌದಿ ದರ ಸಮರ, ಕಚ್ಚಾ ತೈಲ ಬೆಲೆ ಶೇ 30 ಇಳಿಕೆ: 29 ವರ್ಷಗಳಲ್ಲೇ ಅತಿ ದೊಡ್ಡ ಕುಸಿತ

ಏಜೆನ್ಸೀಸ್
Published 9 ಮಾರ್ಚ್ 2020, 6:56 IST
Last Updated 9 ಮಾರ್ಚ್ 2020, 6:56 IST
ಅಮೆರಿಕದ ಕಚ್ಚಾ ತೈಲ ಸಂಗ್ರಹ ಘಟಕವೊಂದರ ಚಿತ್ರ
ಅಮೆರಿಕದ ಕಚ್ಚಾ ತೈಲ ಸಂಗ್ರಹ ಘಟಕವೊಂದರ ಚಿತ್ರ   

ಟೊಕಿಯೊ: ರಷ್ಯಾದೊಂದಿಗೆ ತೈಲ ದರ ಸಮರಕ್ಕೆ ಮುಂದಾಗಿರುವ ಸೌದಿ ಅರೇಬಿಯಾ, ಕಚ್ಚಾ ತೈಲ ಮಾರಾಟ ದರವನ್ನು ಇಳಿಕೆ ಮಾಡಿದೆ. ಇದರ ಪರಿಣಾಮ 1991ರ ನಂತರದಲ್ಲಿ ಇದೇ ಮೊದಲ ಬಾರಿ ಕಚ್ಚಾ ತೈಲ ದರ ತೀವ್ರ ಕುಸಿತಕ್ಕೆ ಒಳಗಾಗಿದೆ.

'ಕೋವಿಡ್‌–19‘ ಸೋಂಕು ಹರಡುತ್ತಿರುವುದರಿಂದ ಚೀನಾ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ತೈಲ ಬೇಡಿಕೆ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಸಂಘಟನೆಯು (ಒಪೆಕ್‌) ಉತ್ಪಾದನೆ ತಗ್ಗಿಸಲು ನಿರ್ಧರಿಸಿತ್ತು. ಈ ಸಂಬಂಧ ಶುಕ್ರವಾರ ರಷ್ಯಾದೊಂದಿಗೆ ನಡೆಸಿದ ಸಂಧಾನ ಮಾತುಕತೆ ಮುರಿದು ಬಿದ್ದಿದೆ. ಇದು ರಷ್ಯಾ ಮತ್ತು ಸೌದಿ ಅರೇಬಿಯಾ ನಡುವೆ ದರ ಸಮರಕ್ಕೆ ಕಾರಣವಾಗಿದೆ.

ಬ್ರೆಂಟ್‌ ಕಚ್ಚಾ ತೈಲದ ಫ್ಯೂಚರ್ಸ್‌ ಬ್ಯಾರೆಲ್‌ಗೆ ಶೇ 31.5ರಷ್ಟು ಇಳಿಕೆಯಾಗಿದ್ದು, ₹2,298 (31.02 ಡಾಲರ್‌) ತಲುಪಿದೆ. ಇದು 1991ರ ಜನವರಿ 17ರಿಂದ ಅತಿ ದೊಡ್ಡ ಕುಸಿತವಾಗಿದೆ. 2016ರ ಫೆಬ್ರುವರಿ 12ರ ನಂತರ ಅತಿ ಕಡಿಮೆ ಬೆಲೆಗೆ ಕಚ್ಚಾ ತೈಲ ಇಳಿಕೆಯಾಗಿದೆ.

ADVERTISEMENT

ಡಾಲರ್‌ ಎದುರು ರೂಪಾಯಿ ಮೌಲ್ಯ ಚೇತರಿಕೆ ಕಂಡಿದ್ದು, ₹73.91ರಲ್ಲಿ ವಹಿವಾಟು ನಡೆದಿದೆ. ಏಷ್ಯಾ ಷೇರುಪೇಟೆಗಳಲ್ಲಿ ತೀವ್ರ ಕುಸಿತ ಉಂಟಾಗಿದೆ ಹಾಗೂ ಚಿನ್ನದ ದರ 2013ಕ್ಕಿಂತ ಅಧಿಕ ಮಟ್ಟ ತಲುಪಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ₹45,250 ಮುಟ್ಟಿದೆ. ಸೆನ್ಸೆಕ್ಸ್‌ 1,451 ಅಂಶ ಕುಸಿದು 36,125.42 ಅಂಶ ತಲುಪಿದೆ.

ಅಮೆರಿಕದ ವೆಸ್ಟ್ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ ಕಚ್ಚಾ ತೈಲ ಶೇ 27.4ರಷ್ಟು ಇಳಿಕೆಯಾಗಿ ಬ್ಯಾರೆಲ್‌ಗೆ 30 ಡಾಲರ್‌ (ಅಂದಾಜು ₹2,222) ತಲುಪಿದೆ. ಮೊದಲ ಗಲ್ಫ್‌ ಸಮರದ (1999) ನಂತರದಲ್ಲಿ ಸೋಮವಾರ ತೀವ್ರ ಕುಸಿತ ಸಂಭವಿಸಿದೆ.

ಜಗತ್ತಿನ ಅತಿ ದೊಡ್ಡ ತೈಲ ರಫ್ತುದಾರ ಸೌದಿ ಅರೇಬಿಯಾ, ಜಗತ್ತಿನ ಎರಡನೇ ಅತಿ ದೊಡ್ಡ ತೈಲ ಉತ್ಪಾದಕ ರಷ್ಯಾ ಜೊತೆಗೆ ದರ ಸಮರ ಸಾರಿದೆ. ದರ ಕಡಿಮೆ ಮಾಡಿ, ಉತ್ಪಾದನೆ ಹೆಚ್ಚಿಸುವ ಮೂಲಕ ಯುರೋಪ್‌ ಮತ್ತು ಏಷ್ಯಾದಲ್ಲಿ ರಷ್ಯಾದೊಂದಿಗೆ ಪೈಪೋಟಿ ನಡೆಸಿ ಅದರ ಮಾರುಕಟ್ಟೆಯನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಸೌದಿ ಅರೇಬಿಯಾ ಮುಂದಾಗಿದೆ. ಈ ಹಿಂದೆ 2014–2016ರಲ್ಲಿ ಅಮೆರಿಕದ ತೈಲ ಉತ್ಪಾದನೆ ತಗ್ಗಿಸಲು ಸೌದಿ ಅರೇಬಿಯಾ, ರಷ್ಯಾ ಮತ್ತು ಮಧ್ಯಪ್ರಾಚ್ಯದ ಇತರ ಉತ್ಪಾದಕ ದೇಶಗಳು ಇಂಥದ್ದೇ ತಂತ್ರ ಅನುಸರಿಸಿದ್ದವು. ಏಷ್ಯಾದ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ತೈಲ ಪೂರೈಕೆ ಮಾಡಿದ್ದವು.

ಏಪ್ರಿಲ್‌ನ ಮಾರಾಟಕ್ಕೆ ಎಲ್ಲ ದರ್ಜೆಯ ಕಚ್ಚಾ ತೈಲ ದರವನ್ನು ಬ್ಯಾರೆಲ್‌ಗೆ 6 ರಿಂದ 8 ಡಾಲರ್‌ ಕಡಿಮೆ ಮಾಡಿ ಸೌದಿ ಅರೇಬಿಯಾ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಮುಂದಾಗಿದೆ. ಆದರೆ, ಇಟಲಿ, ದಕ್ಷಿಣ ಕೊರಿಯಾ ಹಾಗೂ ಅಮೆರಿಕದಲ್ಲೂ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ತೈಲ ಬೇಡಿಕೆ ಕುಸಿಯುವ ಸಾಧ್ಯತೆ ಹೆಚ್ಚಿಸಿದೆ.

ತೈಲ ದರದಲ್ಲಿ ಇಳಿಕೆಯಾಗಿರುವುದರಿಂದಭಾರತಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ.ಸದ್ಯ, ಭಾರತವು ತನ್ನ ಬೇಡಿಕೆಯ ಶೇ 80ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ, ಆಮದು ಹೊರೆಯೂ ಕಡಿಮೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.