ADVERTISEMENT

ಕಳಪೆ ಅಡಿಕೆ ಆಮದು ತಡೆಗೆ ಕ್ರಮ

ಪಿಟಿಐ
Published 11 ಫೆಬ್ರುವರಿ 2020, 14:01 IST
Last Updated 11 ಫೆಬ್ರುವರಿ 2020, 14:01 IST
ಅಡಿಕೆ
ಅಡಿಕೆ   

ನವದೆಹಲಿ : ಸಾರ್ಕ್‌ ದೇಶಗಳಿಂದ ಆಮದು ಮಾಡಿಕೊಳ್ಳುವ ಅಡಿಕೆಯು ಮೂಲತಃ ಅಲ್ಲಿಯೇ ಬೆಳೆಯುವುದನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಬೇಕೆಂದು ಕೃಷಿ ಸಚಿವಾಲಯವು ಹಣಕಾಸು ಸಚಿವಾಲಯವನ್ನು ಕೇಳಿಕೊಂಡಿದೆ.

‘ಮ್ಯಾನ್ಮಾರ್‌ ಮತ್ತು ನೇಪಾಳದಿಂದ ಅಕ್ರಮವಾಗಿ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಅಗ್ಗದ ಮತ್ತು ಕಳಪೆ ಗುಣಮಟ್ಟದ ಅಡಿಕೆ ಆಮದು ನಿರ್ಬಂಧಿಸಲು ಅಡಿಕೆಯನ್ನು ಆಯಾ ದೇಶಗಳಲ್ಲಿಯೇ ಬೆಳೆಯುತ್ತಿರುವುದನ್ನು ನಿಯಮಾನುಸಾರ ದೃಢಪಡಿಸಿಕೊಳ್ಳಲು ಕೇಳಿಕೊಳ್ಳಲಾಗಿದೆ’ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಲೋಕಸಭೆಗೆ ತಿಳಿಸಿದ್ದಾರೆ.

‘ದೇಶಿ ಅಡಿಕೆ ಬೆಳೆಗಾರರ ಹಿತರಕ್ಷಿಸುವ ಉದ್ದೇಶಕ್ಕೆ, ಅಗ್ಗದ ಮತ್ತು ಕಳಪೆ ಗುಣಮಟ್ಟದ ಅಡಿಕೆ ಆಮದು ನಿರ್ಬಂಧಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕನಿಷ್ಠ ಆಮದು ಬೆಲೆಯನ್ನು (ಎಂಐಪಿ) ಪ್ರತಿ ಕೆಜಿಗೆ ₹ 251ರಂತೆ ನಿಗದಿಪಡಿಸಲಾಗಿದೆ. ವೆಚ್ಚ, ವಿಮೆ ಮತ್ತು ಸಾಗಣೆ ಮೌಲ್ಯವು ಪ್ರತಿ ಕೆಜಿಗೆ ₹ 251ಕ್ಕಿಂತ ಕಡಿಮೆ ಇದ್ದರೆ ಅಂತಹ ಅಡಿಕೆ ಆಮದು ನಿರ್ಬಂಧಿಸಲಾಗುವುದು’ ಎಂದು ಹೇಳಿದ್ದಾರೆ.

ADVERTISEMENT

ವಿದೇಶ ವ್ಯಾಪಾರ ನಿಯಮಗಳಡಿ ರಫ್ತು ಮಾಡುವ ದೇಶವು ಸರಕು ತನ್ನ ದೇಶದಲ್ಲಿಯೇ ಬೆಳೆದಿರುವುದನ್ನು ಸಾಬೀತುಪಡಿಸುವ ಪ್ರಮಾಣಪತ್ರ ಸಲ್ಲಿಸಬೇಕು. ಇದರಿಂದ ಸರಕುಗಳನ್ನು ತಂದು ಸುರಿಯುವುದನ್ನು ನಿರ್ಬಂಧಿಸಬಹುದು.

ಇತರ ದೇಶಗಳಲ್ಲಿ ಬೆಳೆಯುವ ಅಡಿಕೆಯನ್ನು, ದಕ್ಷಿಣ ಏಷ್ಯಾ ಉಚಿತ ವ್ಯಾಪಾರ ಪ್ರದೇಶ ಒಪ್ಪಂದದಡಿ ಕಡಿಮೆ ಆಮದು ಸುಂಕದ ಕಾರಣಕ್ಕೆ ‘ಸಾರ್ಕ್‌’ ದೇಶಗಳ ಮುಖಾಂತರ ಭಾರತಕ್ಕೆ ರಫ್ತು ಮಾಡಲಾಗುತ್ತಿದೆ. ಇದನ್ನು ನಿರ್ಬಂಧಿಸಲು ರೆವಿನ್ಯೂ ಇಲಾಖೆಗೂ ಮನವಿ ಮಾಡಿಕೊಳ್ಳಲಾಗಿದೆ.

ಕಡಿಮೆ ಆಮದು ಸುಂಕದ ಕಾರಣಕ್ಕೆ ನೆರೆಹೊರೆ ದೇಶಗಳಿಂದ ಅಡಿಕೆ ಆಮದು ಪ್ರಮಾಣ ಹೆಚ್ಚುತ್ತಿದೆ ಎಂದು ದೇಶಿ ಅಡಿಕೆ ಬೆಳೆಗಾರರು ಆರೋಪಿಸುತ್ತಿದ್ದಾರೆ.

ಆಮದು ಮಾಡಿಕೊಂಡ ಅಡಿಕೆಗೆ ಅನುಮತಿ ನೀಡುವ ಮುನ್ನ ಗುಣಮಟ್ಟದ ಮಾನದಂಡವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರವು ಕೂಡ (ಎಫ್‌ಎಸ್‌ಎಸ್‌ಎಐ) ತನ್ನ ಅಧಿಕಾರಿಗಳಿಗೆ ತಾಕೀತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.