
ನವದೆಹಲಿ: ಸೀಮಾ ಸುಂಕವನ್ನು ಸರಳವಾಗಿಸುವುದು ಕೇಂದ್ರ ಸರ್ಕಾರದ ಮುಂದಿನ ಹಂತದ ಸುಧಾರಣಾ ಪ್ರಕ್ರಿಯೆಯ ಭಾಗ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರವು ಜಿಎಸ್‌ಟಿ ದರ ಪರಿಷ್ಕರಣೆ, ಆದಾಯ ತೆರಿಗೆ ಮಿತಿ ಏರಿಕೆಯಂತಹ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.
‘ನಾವು ಸೀಮಾ ಸುಂಕ ವ್ಯವಸ್ಥೆಯಲ್ಲಿ ಆಮೂಲಾಗ್ರವಾದ ಬದಲಾವಣೆಯನ್ನು ತರಬೇಕಿದೆ... ಸೀಮಾ ಸುಂಕ ವ್ಯವಸ್ಥೆಯು ಸಂಕೀರ್ಣವಾದುದಲ್ಲ ಎಂದು ಜನರಿಗೆ ಅನ್ನಿಸಬೇಕಾದರೆ ಅದನ್ನು ಸರಳಗೊಳಿಸಬೇಕು. ಅದನ್ನು ಇನ್ನಷ್ಟು ಹೆಚ್ಚು ಪಾರದರ್ಶಕ ಆಗಿಸಬೇಕು’ ಎಂದು ಸೀತಾರಾಮನ್ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಆದಾಯ ತೆರಿಗೆ ವ್ಯವಸ್ಥೆಯಲ್ಲಿನ ಪಾರದರ್ಶಕ ಅಂಶಗಳನ್ನು ಸೀಮಾಸುಂಕ ವ್ಯವಸ್ಥೆಗೆ ತರಬೇಕಿದೆ. ಸೀಮಾಸುಂಕ ವ್ಯವಸ್ಥೆಯಲ್ಲಿ ತರಲು ಉದ್ದೇಶಿಸಿರುವ ಸುಧಾರಣೆಗಳು ಸಮಗ್ರವಾಗಿರುತ್ತವೆ, ಸುಂಕದ ಪ್ರಮಾಣ ಪರಿಷ್ಕರಿಸುವುದನ್ನು ಒಳಗೊಂಡಿರುತ್ತವೆ ಎಂದು ನಿರ್ಮಲಾ ಅವರು ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದ ಘೋಷಣೆಯು ಫೆಬ್ರುವರಿ 1ರಂದು ಮಂಡನೆಯಾಗುವ ಕೇಂದ್ರ ಬಜೆಟ್‌ನಲ್ಲಿ ಇರುವ ಸಾಧ್ಯತೆ ಇದೆ.
‘ಕಳೆದ ಎರಡು ವರ್ಷಗಳಲ್ಲಿ ನಾವು ಸೀಮಾಸುಂಕದ ಪ್ರಮಾಣವನ್ನು ಇಳಿಕೆ ಮಾಡಿದ್ದೇವೆ. ಆದರೆ ಕೆಲವು ಉತ್ಪನ್ನಗಳ ಮೇಲಿನ ಸೀಮಾಸುಂಕವು ಸರಿಯಾದ ಮಟ್ಟದಲ್ಲಿ ಇಲ್ಲ ಎಂದು ಭಾವಿಸಲಾಗಿದೆ, ಅವುಗಳ ಮೇಲಿನ ಸೀಮಾಸುಂಕವನ್ನು ಕೂಡ ಕಡಿಮೆ ಮಾಡಬೇಕಿದೆ. ಸೀಮಾಸುಂಕ ವಿಭಾಗವನ್ನು ಸ್ವಚ್ಛಗೊಳಿಸುವುದು ನನ್ನ ಮುಂದಿರುವ ದೊಡ್ಡ ಕೆಲಸ’ ಎಂದು ನಿರ್ಮಲಾ ತಿಳಿಸಿದ್ದಾರೆ.
ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವೆ, ರೂಪಾಯಿ ತನ್ನ ಸಹಜ ಮೌಲ್ಯವನ್ನು ತಾನಾಗಿಯೇ ಕಂಡುಕೊಳ್ಳಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.