ಪ್ರಾತಿನಿಧಿಕ ಚಿತ್ರ
ನವದೆಹಲಿ: ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ದೇಶದಲ್ಲಿನ ಬೇಡಿಕೆಯನ್ನು ಪೂರೈಸಲು 9.74 ಲಕ್ಷ ಟನ್‌ಗಳಷ್ಟು ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ರಸಗೊಬ್ಬರವನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ಮಂಗಳವಾರ ಹೇಳಿದೆ.
ರಾಜ್ಯ ಸಭೆಗೆ ಲಿಖಿತ ರೂಪದಲ್ಲಿ ಉತ್ತರಿಸಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, ‘ಏಪ್ರಿಲ್‌ನಲ್ಲಿ ಭಾರತ 2.89 ಲಕ್ಷ ಟನ್ ಡಿಎಪಿಯನ್ನು ಆಮದು ಮಾಡಿಕೊಂಡಿದೆ. ಮೇ ತಿಂಗಳಲ್ಲಿ 2.36 ಲಕ್ಷ ಟನ್ ಹಾಗೂ ಜೂನ್‌ನಲ್ಲಿ 4.49 ಲಕ್ಷ ಟನ್ ಆಮದು ಮಾಡಿಕೊಂಡಿದೆ’ ಎಂದು ತಿಳಿಸಿದ್ದಾರೆ.
2024–25ರಲ್ಲಿ ಡಿಎಪಿ ಆಮದು 45.69 ಲಕ್ಷ ಟನ್‌ಗಳಷ್ಟಿತ್ತು, 2023–24ರಲ್ಲಿ 55.67 ಲಕ್ಷ ಟನ್, 2022–23ರಲ್ಲಿ 65.83 ಲಕ್ಷ ಟನ್, 2021–22 ರಲ್ಲಿ 54.62 ಲಕ್ಷ ಟನ್ ಹಾಗೂ 2020–21ರಲ್ಲಿ 48.82ಲಕ್ಷ ಟನ್ ಡಿಎಪಿಯನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಅಂಕಿ ಅಂಶ ವಿವರಿಸಿದರು.
2025ರ ಖರಿಫ್ (ಮುಂಗಾರು) ವೇಳೆ ರಸಗೊಬ್ಬರಗಳ ಅಗತ್ಯವನ್ನು ಪೂರೈಸಲು ಲಭ್ಯತೆಯನ್ನು ಸರ್ಕಾರ ಖಚಿತಪಡಿಸಿಕೊಳ್ಳುತ್ತಿದೆ. ಬಿತ್ತನೆಯ ವ್ಯಾಪ್ತಿ ಹೆಚ್ಚಳ ಮತ್ತು ಮುಂಗಾರಿನ ಪರಿಸ್ಥಿತಿಯಿಂದಾಗಿ 2025ರ ಖಾರಿಫ್ ಋತುವಿನಲ್ಲಿ ರಾಸಾಯನಿಕ ಗೊಬ್ಬರಗಳ ಅಗತ್ಯ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
2010ರ ಏಪ್ರಿಲ್‌ನಿಂದ ಕೇಂದ್ರ ಸರ್ಕಾರ ( ಪಿ ಆ್ಯಂಡ್ ಕೆ–ಫಾಸ್ಪೆಟಿಕ್ ಮತ್ತು ಪೊಟ್ಯಾಸಿಕ್) ರಂಜಕ ಹಾಗೂ ಪೊಷ್ಯಾಷ್ ರಸಗೊಬ್ಬರದ ಸಹಾಯಧನವನ್ನು ಜಾರಿಗೆ ತಂದಿದೆ.
ಇದರ ಅಡಿಯಲ್ಲಿ, ವಾರ್ಷಿಕ ಅಥವಾ ದ್ವೈವಾರ್ಷಿಕ ದಾಖಲೆಗಳನ್ನು ಆಧರಿಸಿ ನಿರ್ಧರಿಸಲಾದ ನಿಗದಿತ ಮೊತ್ತದ ಸಬ್ಸಿಡಿಯನ್ನು ಅಧಿಸೂಚಿತ ಪಿ ಆ್ಯಂಡ್ ಕೆ ರಸಗೊಬ್ಬರಗಳ ಮೇಲೆ ಅವುಗಳ ಪೋಷಕಾಂಶದ ಅಂಶವನ್ನು ಅವಲಂಬಿಸಿ ನೀಡಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.