
ನವದೆಹಲಿ: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸಲು ಸುಧಾರಣೆಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದರು.
ಕೇಂದ್ರ ಬಜೆಟ್‌ಗೆ ಪೂರ್ವಭಾವಿಯಾಗಿ ಹಿರಿಯ ಅರ್ಥಶಾಸ್ತ್ರಜ್ಞರ ಜೊತೆ ಅವರು ಸಮಾಲೋಚನೆ ನಡೆಸಿದರು. ‘ಆತ್ಮನಿರ್ಭರತೆ ಮತ್ತು ರಾಚನಿಕ ಪರಿವರ್ತನೆ: ವಿಕಸಿತ ಭಾರತಕ್ಕೆ ಕಾರ್ಯಸೂಚಿ’ ಎಂಬ ವಿಷಯವಾಗಿ ಸಮಾಲೋಚನೆ ನಡೆಯಿತು.
ದೇಶವು ನೀತಿ ನಿರೂಪಣೆ ಸಂದರ್ಭದಲ್ಲಿ ಹಾಗೂ ಬಜೆಟ್ ರೂಪಿಸುವಾಗ 2047ರ ಗುರಿಗಳ ಮೇಲೆ ಗಮನ ಇರಿಸಿರಬೇಕು ಎಂದು ಅವರು ಒತ್ತಿಹೇಳಿದರು.
ತಯಾರಿಕೆ ಹಾಗೂ ಸೇವಾ ವಲಯಗಳ ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಇನ್ನಷ್ಟು ಹೆಚ್ಚಿಸಲು ಅರ್ಥಶಾಸ್ತ್ರಜ್ಞರು ಸಭೆಯಲ್ಲಿ ಸಲಹೆ ನೀಡಿದರು.
ಕುಟುಂಬಗಳ ಮಟ್ಟದಲ್ಲಿ ಉಳಿತಾಯ ಹೆಚ್ಚಿಸಿ, ಮೂಲಸೌಕರ್ಯ ಅಭಿವೃದ್ಧಿಪಡಿಸಿ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರಾಚನಿಕ ಬದಲಾವಣೆಗಳನ್ನು ತರುವುದರ ಬಗ್ಗೆ ಸಭೆಯ ಚರ್ಚೆಗಳು ಗಮನ ನೀಡಿದವು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿಗಳಾದ ಪಿ.ಕೆ. ಮಿಶ್ರಾ ಮತ್ತು ಶಕ್ತಿಕಾಂತ ದಾಸ್, ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೇರಿ ಮತ್ತಿತರರು ಸಭೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.