ADVERTISEMENT

ಧನ್‌ತೇರಸ್: ಮಂದಗತಿಯ ಮಾರಾಟ ನಿರೀಕ್ಷೆ

ಪಿಟಿಐ
Published 12 ನವೆಂಬರ್ 2020, 15:52 IST
Last Updated 12 ನವೆಂಬರ್ 2020, 15:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ / ಮುಂಬೈ: ಚಿನ್ನದ ದರ ಏರಿಕೆ ಹಾಗೂ ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಈ ಬಾರಿಯ ಧನ್‌ತೇರಸ್‌ ಮಾರಾಟವು ಕಳೆದ ವರ್ಷದಷ್ಟು ಉತ್ತಮವಾಗಿರುವುದಿಲ್ಲ ಎನ್ನುವುದು ಚಿನ್ನಾಭರಣ ವರ್ತಕರು ಮತ್ತು ಉದ್ಯಮ ವಲಯದ ತಜ್ಞರ ಅಭಿಪ್ರಾಯ.

ಚಿನ್ನಾಭರಣಗಳ ಖರೀದಿಗೆ ಶುಭ ದಿನ ಎಂದು ಪರಿಗಣಿತವಾಗಿರುವ ಧನ್‌ತೇರಸ್‌ಅನ್ನು ಈ ವರ್ಷ ಗುರುವಾರ ಮತ್ತು ಶುಕ್ರವಾರ ಆಚರಿಸಲಾಗುತ್ತಿದೆ.

ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಚಿನ್ನಾಭರಣಗಳ ಖರೀದಿಯಲ್ಲಿ ಸುಧಾರಣೆ ಕಂಡುಬರುತ್ತಿದೆಯಾದರೂ ಬೆಲೆಯು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಜನರು ಚಿನ್ನದ ಮೇಲೆ ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡುತ್ತಿದ್ದಾರೆ ಎಂದು ವರ್ತಕರು ಹೇಳಿದ್ದಾರೆ.

ADVERTISEMENT

ಹಬ್ಬದ ಮತ್ತು ಮದುವೆ ಸಮಾರಂಭಗಳ ಬೇಡಿಕೆ ಪೂರೈಸಲು ಹಳೆಯ ಚಿನ್ನಾಭರಣಗಳನ್ನು ಮರುಬಳಕೆ ಮಾಡುತ್ತಿರುವುದಾಗಿ ಚಿನ್ನಾಭರಣ ವರ್ತಕರು ಹೇಳಿದ್ದಾರೆ.

ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು ಮನೆಯಿಂದ ಹೊರಬಂದು ಖರೀದಿಸುವ ಪ್ರಮಾಣ ಕಡಿಮೆ ಇದೆ. ಕೆಲವು ಗ್ರಾಹಕರು ಆನ್‌ಲೈನ್‌ ಮಾರಾಟ ಸೌಲಭ್ಯ ಇರುವ ಮಳಿಗೆಗಳಲ್ಲಿ ಬುಕಿಂಗ್‌ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಚಿನ್ನವು ಸದ್ಯ 10 ಗ್ರಾಂಗೆ ₹ 51,000 ರಿಂದ ₹ 53 ಸಾವಿರ ದರದಲ್ಲಿದೆ. 2019ರ ಧನ್‌ತೇರಸ್‌ ಸಂದರ್ಭದಲ್ಲಿ 10ಗ್ರಾಂಗೆ ₹ 38,096 ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಚಿನ್ನದ ದರ ಶೇ 35ರಷ್ಟು ಹೆಚ್ಚಾಗಿದೆ. ಬೆಳ್ಳಿ ಧಾರಣೆ ಸದ್ಯ ಕೆ.ಜಿಗೆ ₹ 62 ಸಾವಿರದಂತೆ ಇದೆ.

ಜನರು ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ. ಮಾರಾಟದಲ್ಲಿ ಚೇತರಿಕೆ ಕಾಣಿಸುತ್ತಿದೆ. ಆದರೆ, ಕಳೆದ ವರ್ಷದ ರೀತಿ ಇರುವುದಿಲ್ಲ. ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ಇರಲಿದೆ ಎಂದು ವಿಶ್ವ ಚಿನ್ನ ಸಮಿತಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಪಿ.ಆರ್‌. ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.