ADVERTISEMENT

ನೇರ ತೆರಿಗೆ ಸಂಗ್ರಹ ಹೆಚ್ಚಳ: ಕೇಂದ್ರ ಸರ್ಕಾರ

ಸೆಪ್ಟೆಂಬರ್ 17ರ ವರೆಗೆ ₹10.82 ಲಕ್ಷ ಕೋಟಿ ನಿವ್ವಳ ನೇರ ತೆರಿಗೆ ಸಂಗ್ರಹ: ಕೇಂದ್ರ

ಪಿಟಿಐ
Published 19 ಸೆಪ್ಟೆಂಬರ್ 2025, 13:56 IST
Last Updated 19 ಸೆಪ್ಟೆಂಬರ್ 2025, 13:56 IST
ನೇರ ತೆರಿಗೆ
ನೇರ ತೆರಿಗೆ   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ 1ರಿಂದ ಸೆಪ್ಟೆಂಬರ್ 17ರ ವರೆಗೆ ದೇಶದ ನಿವ್ವಳ ನೇರ ತೆರಿಗೆ ಸಂಗ್ರಹವು ₹10.82 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2024–25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹9.91 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ಸಂಗ್ರಹವು ಶೇ 9ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಹೆಚ್ಚಿದ ಮುಂಗಡ ತೆರಿಗೆ ಮತ್ತು ಮರುಪಾವತಿಯಲ್ಲಿನ (ರೀಫಂಡ್‌) ಇಳಿಕೆಯು ಸಂಗ್ರಹ ಹೆಚ್ಚಲು ಕಾರಣವಾಗಿದೆ ಎಂದು ತಿಳಿಸಿದೆ. 

ADVERTISEMENT

ಏಪ್ರಿಲ್‌ 1ರಿಂದ ಸೆಪ್ಟೆಂಬರ್‌ 17ರ ವರೆಗೆ ಮರುಪಾವತಿ ಪ್ರಮಾಣ ಶೇ 24ರಷ್ಟು ಇಳಿಕೆಯಾಗಿದ್ದು, ₹1.61 ಲಕ್ಷ ಕೋಟಿಯಾಗಿದೆ. ಈ ಅವಧಿಯಲ್ಲಿ ಮುಂಗಡ ತೆರಿಗೆ ಸಂಗ್ರಹವು ಶೇ 6ರಷ್ಟು ಹೆಚ್ಚಳವಾಗಿದ್ದು, ₹3.52 ಲಕ್ಷ ಕೋಟಿ ದಾಟಿದೆ. ಆದರೆ, ಕಾರ್ಪೊರೇಟ್‌ಯೇತರ ತೆರಿಗೆ ಸಂಗ್ರಹವು ಶೇ 7ರಷ್ಟು ಇಳಿಕೆಯಾಗಿದ್ದು, ₹96,784 ಕೋಟಿಯಾಗಿದೆ. 

ನಿವ್ವಳ ಕಾರ್ಪೊರೇಟ್ ತೆರಿಗೆ ಸಂಗ್ರಹವು ₹4.72 ಲಕ್ಷ ಕೋಟಿ ಮತ್ತು ವೈಯಕ್ತಿಕ ಆದಾಯ ತೆರಿಗೆಯನ್ನು ಒಳಗೊಂಡಿರುವ ಕಾರ್ಪೊರೇಟ್‌ಯೇತರ ತೆರಿಗೆ, ₹5.84 ಲಕ್ಷ ಕೋಟಿಯಷ್ಟಾಗಿದೆ. 

ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಸಂಗ್ರಹವು ₹26,306 ಕೋಟಿಗೆ ಹೆಚ್ಚಳವಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹26,154 ಕೋಟಿಯಷ್ಟಿತ್ತು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ನೇರ ತೆರಿಗೆ ಮೂಲಕ ₹25.20 ಲಕ್ಷ ಕೋಟಿ ಸಂಗ್ರಹದ ಗುರಿ ಹೊಂದಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 12ರಷ್ಟು ಹೆಚ್ಚಳವಿದು. ಎಸ್‌ಟಿಟಿ ಮೂಲಕ ₹78 ಸಾವಿರ ಕೋಟಿ ಸಂಗ್ರಹಿಸಲು ಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.