ADVERTISEMENT

ದಕ್ಷತೆ ಹೆಚ್ಚಿಸಲು ಷೇರು ವಿಕ್ರಯ: ನಿರ್ಮಲಾ ಸೀತಾರಾಮನ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:31 IST
Last Updated 10 ಜೂನ್ 2022, 19:31 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ಬೆಂಗಳೂರು: ‘ಕೇಂದ್ರೋದ್ಯಮಗಳನ್ನು ಮುಚ್ಚುವುದು ಷೇರು ವಿಕ್ರಯ ಕಾರ್ಯಕ್ರಮದ ಉದ್ದೇಶ ಅಲ್ಲ. ಅವುಗಳ ಕಾರ್ಯದಕ್ಷತೆ ಹೆಚ್ಚಿಸುವ ಮೂಲಕ ಆರ್ಥಿಕತೆಗೆ ಕೊಡುಗೆ ನೀಡುವಂತೆ ಮಾಡಲು ಷೇರು ವಿಕ್ರಯ ನಡೆಸಲಾಗುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ತಿಳಿಸಿದರು.

ಸ್ವತಂತ್ರ ಭಾರತದ 75ನೆಯ ವರ್ಷಾಚರಣೆಯ ಅಂಗವಾಗಿ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯು (ಡಿಐಪಿಎಎಂ) ನಗರದಲ್ಲಿ ಆಯೋಜಿಸಿದ್ದ ‘ಮಾರುಕಟ್ಟೆ ಮೂಲಕ ಸಂಪತ್ತಿನ ಸೃಷ್ಟಿ’ ಕುರಿತು ಅವರು ಮಾತನಾಡಿದರು. ಸರ್ಕಾರಿ ವಲಯದ ಕಂಪನಿಗಳಲ್ಲಿ ಖಾಸಗಿ ವಲಯದ ಹೊಸ ಆಲೋಚನೆಗಳು ಮತ್ತು ಕಾರ್ಯದಕ್ಷತೆಯ ಅಗತ್ಯ ಇದೆ. ಸರ್ಕಾರಿ–ಖಾಸಗಿ ಸಹಭಾಗಿತ್ವದ ಕಂಪನಿಗಳು ದೇಶದ ಒಳಿತಿಗಾಗಿ ಕೆಲಸ ಮಾಡಬಲ್ಲವು ಎಂದು ಅವರು ಅಭಿಪ್ರಾಯಪಟ್ಟರು.

ಬಾಂಡ್‌ ಮಾರುಕಟ್ಟೆಯನ್ನು ವಿಸ್ತರಿಸುವ ನಿಟ್ಟಿನಲ್ಲಿಯೂ ಇಲಾಖೆಯ ಹೆಚ್ಚಿನ ಗಮನ ಹರಿಸುತ್ತಿದೆ ಎಂದರು. ‘ಕೇಂದ್ರೋದ್ಯಮಗಳ ಭಾರತ್‌ ಬಾಂಡ್‌ ಇಟಿಎಫ್‌ ಇದಕ್ಕೆ ಉತ್ತಮ ಉದಾಹರಣೆ. ಮಾರುಕಟ್ಟೆಯಲ್ಲಿ ಇರುವ ಒಟ್ಟಾರೆ ಇಟಿಎಫ್‌ಗಳಲ್ಲಿ ಭಾರತ್‌ ಬಾಂಡ್‌ ಇಟಿಎಫ್‌ ಪಾಲು ಶೇ 84ರಷ್ಟು ಇದೆ. ಇದರ ನಿರ್ವಹಣಾ ಸಂಪತ್ತು ಮೌಲ್ಯ ₹ 53 ಸಾವಿರ ಕೋಟಿಗೂ ಹೆಚ್ಚಿಗೆ ಇದೆ’ ಎಂದು ನಿರ್ಮಲಾ ಮಾಹಿತಿ ನೀಡಿದರು.

ADVERTISEMENT

‘ಬಂಡವಾಳ ಮಾರುಕಟ್ಟೆಗೆ ಜನರು ಬರದೇ ಇರಲು ಮುಖ್ಯವಾಗಿ ನಾಲ್ಕು ಕಾರಣಗಳಿವೆ.ಮಾರುಕಟ್ಟೆಯ ಬಗ್ಗೆ ತಿಳಿವಳಿಕೆ ಇಲ್ಲದಿರುವುದು ಮೊದಲ ಕಾರಣ. ಹೀಗಾಗಿಯೇ ದೇಶದಲ್ಲಿ ಶೇಕಡ 6ರಷ್ಟು ಜನ ಮಾತ್ರ ಡಿಮ್ಯಾಟ್‌ ಖಾತೆ ಹೊಂದಿದ್ದಾರೆ. ಇವರಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿರುವವ ಶೇ 1ರಷ್ಟು ಮಾತ್ರ. ಎರಡನೆಯದು, ಎಫ್‌.ಡಿ. ತರಹದ ಸಾಂಪ್ರದಾಯಿಕ ಹೂಡಿಕೆಗಳಲ್ಲಿ ಮಾತ್ರ ಹಣ ತೊಡಗಿಸುವ ಮನೋಭಾವ. ಮೂರನೆಯದು, ಚಿನ್ನ, ಆಸ್ತಿ ಖರೀದಿಗೆ ಆದ್ಯತೆ ನೀಡುತ್ತಿರವುದು. ನಾಲ್ಕನೆಯದು, ಮಾರುಕಟ್ಟೆಯ ಬಗ್ಗೆ ನಂಬಿಕೆ ಇಲ್ಲದಿರುವುದು’ ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತ ದಿನೇಶ್‌ ಚಂದ್ರ ಪಟ್ವಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.