ADVERTISEMENT

ಡಿ–ಮಾರ್ಟ್‌ ಲಾಭ ಶೇ 18ರಷ್ಟು ಏರಿಕೆ

ಪಿಟಿಐ
Published 10 ಜನವರಿ 2026, 14:25 IST
Last Updated 10 ಜನವರಿ 2026, 14:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಡಿ–ಮಾರ್ಟ್‌’ ಸೂಪರ್‌ ಮಾರ್ಕೆಟ್‌ಗಳ ಮಾಲೀಕತ್ವ ಹೊಂದಿರುವ ಅವೆನ್ಯು ಸೂಪರ್‌ಮಾರ್ಟ್ಸ್‌ ಲಿಮಿಟೆಡ್‌ ಡಿಸೆಂಬರ್‌ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ್ದು, ಕಂಪನಿಯ ಒಟ್ಟು ನಿವ್ವಳ ಲಾಭವು ಶೇ 18.27ರಷ್ಟು ಹೆಚ್ಚಳ ಕಂಡಿದೆ.

ಈ ತ್ರೈಮಾಸಿಕದಲ್ಲಿ ಕಂಪನಿಯು ₹855.78 ಕೋಟಿ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ₹723.54 ಕೋಟಿ ಆಗಿತ್ತು.

ಕಂಪನಿಯ ಕಾರ್ಯಾಚರಣೆ ವರಮಾನವು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 13.32ರಷ್ಟು ಹೆಚ್ಚಳವಾಗಿದ್ದು ₹18,100 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ವರಮಾನವು ₹15,972 ಕೋಟಿ ಆಗಿತ್ತು. ಕಂಪನಿಯ ಒಟ್ಟು ವೆಚ್ಚಗಳು ಶೇ 13ರಷ್ಟು ಹೆಚ್ಚಳವಾಗಿವೆ.

ADVERTISEMENT

ದಿನಬಳಕೆ ಉತ್ಪನ್ನಗಳ ಬೆಲೆ ಇಳಿಕೆಯು ವರಮಾನ ಹೆಚ್ಚಳದ ಮೇಲೆ ಒಂದಿಷ್ಟು ಪರಿಣಾಮ ಉಂಟುಮಾಡಿದೆ ಎಂದು ಕಂಪನಿಯ ನಿಯೋಜಿತ ಸಿಇಒ ಅನ್ಶುಲ್ ಅಸಾವಾ ಹೇಳಿದ್ದಾರೆ.

ಎಫ್‌ಎಂಸಿಜಿ, ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು ಸೇರಿದಂತೆ ನೂರಾರು ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವನ್ನು ಸೆಪ್ಟೆಂಬರ್‌ 22ರಿಂದ ಕಡಿಮೆ ಮಾಡಲಾಗಿದೆ. ಅದು ಜಾರಿಗೆ ಬಂದ ನಂತರದ ಮೊದಲ ಪೂರ್ಣ ತ್ರೈಮಾಸಿಕದ (ಅಕ್ಟೋಬರ್‌–ಡಿಸೆಂಬರ್‌) ಹಣಕಾಸಿನ ಫಲಿತಾಂಶ ಇದಾಗಿದೆ.

ಅವೆನ್ಯು ಸೂಪರ್‌ಮಾರ್ಟ್ಸ್‌ ಕಂಪನಿಯು ಡಿ–ಮಾರ್ಟ್‌ ಮಳಿಗೆಗಳ ಮೂಲಕ ಎಫ್‌ಎಂಸಿಜಿ, ದಿನಸಿ, ಬಟ್ಟೆ, ಎಲೆಕ್ಟ್ರಾನಿಕ್ಸ್‌ ಸೇರಿದಂತೆ ಮನೆಬಳಕೆಯ ಹಲವು ಬಗೆಯ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.