ADVERTISEMENT

ಪ್ರಶ್ನೋತ್ತರ | ನನಗೆ ಪಿಂಚಣಿ ಬರುತ್ತದೆ ಸ್ಟ್ಯಾಂಡರ್ಡ್ ಡಿಡಕ್ಷನ್ ಅವಕಾಶವಿದೆಯೇ?

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:30 IST
Last Updated 16 ಜುಲೈ 2019, 19:30 IST
   

–ಎಂ. ಜಯದೇವಿ, ಬೆಂಗಳೂರು

ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ 2016ರಲ್ಲಿ ವಿಆರ್‌ಎಸ್‌ ಪಡೆದಿದ್ದೇನೆ. ನನಗೆ ₹ 8,900 ಪಿಂಚಣಿ ಬರುತ್ತದೆ. ನನಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಅವಕಾಶವಿದೆಯೇ. ತಿಳಿಸಿರಿ.

ಉತ್ತರ: ಸೆಕ್ಷನ್ 16 ಆಧಾರದ ಮೇಲೆ ಹಾಲಿ ನೌಕರಿಯಲ್ಲಿರುವವರು ಹಾಗೂ ಎಲ್ಲಾ ಪಿಂಚಣಿ ಪಡೆಯುವ ವ್ಯಕ್ತಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ವಯವಾಗುತ್ತದೆ. ತಾರೀಖು 31–3–2018ರ ವರೆಗೆ₹ 40,000, 1–4–2019ರ ನಂತರ₹ 50,000 ಸ್ಟ್ಯಾಂಡರ್ಡ್ ಡಿಡಕ್ಷನ್ ನಿಮಗಿದೆ. ನೀವು ಹಿರಿಯ ನಾಗರಿಕರಾಗಿದ್ದರೆ ಸೆಕ್ಷನ್ 80 TTA+TTB ಸೇರಿ ಬ್ಯಾಂಕ್ ಠೇವಣಿಯಿಂದ ಇರುವ ಬಡ್ಡಿಯಲ್ಲಿಯೂ ಗರಿಷ್ಠ ₹ 50,000 ಕಳೆದು ತೆರಿಗೆ ಸಲ್ಲಿಸಬಹುದು. ನೀವು ತೆರಿಗೆಗೆ ಒಳಗಾಗುವುದಿಲ್ಲ.

ADVERTISEMENT

ಹೆಸರು ಬೇಡ, ಊರು ಹಾನಗಲ್

2017ರಲ್ಲಿ DHFL ನಿಂದ₹ 8 ಲಕ್ಷ ಗೃಹ ಸಾಲ ಪಡೆದಿದ್ದೆ. EMI₹ 8,880. ನಾನು LIC ಯಿಂದ ಬರುವ ಸಂಪೂರ್ಣ ಹಣ ಗೃಹಸಾಲಕ್ಕೆ ತುಂಬಬೇಕೆಂದಿದ್ದೇನೆ. ಈ ಹಣ ಅಸಲಿಗೆ ಅಥವಾ ಬಡ್ಡಿಗೆ ಹೇಗೆ ತುಂಬಲಿ ತಿಳಿಸಿರಿ.

ಉತ್ತರ: ನೀವು DHFL ನಿಂದ₹ 8 ಲಕ್ಷ ಗೃಹಸಾಲ ಪಡೆದು ತಿಂಗಳಿಗೆ₹ 8,880 ತುಂಬುತ್ತಿರುವುದರಿಂದ LIC ಯಿಂದ ಬರುವ ಹಣ ಅಸಲಿಗೆ ತುಂಬಿ, EMI ಕಡಿಮೆ ಮಾಡಿಕೊಳ್ಳಿ. ಇದರಿಂದ ನಿಮಗೆ ಅನಕೂಲವಾಗುತ್ತದೆ.

ಪ್ರಭಾ ಆಚಾರ್ಯ, ಜಯನಗರ, ಬೆಂಗಳೂರು

ಗೃಹಿಣಿ. ತಮ್ಮ ಅಂಗವಿಕಲ. ₹ 4 ಲಕ್ಷ ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ, ₹ 3.75 ಕರ್ನಾಟಕ ಬ್ಯಾಂಕಿನಲ್ಲಿ, ಮ್ಯೂಚುವಲ್ ಫಂಡ್‌ನಲ್ಲಿ₹ 2 ಲಕ್ಷ ಇಟ್ಟಿದ್ದೇನೆ. ಅವನ ಸೇವಾವಧಿ ಮುಗಿಯುತ್ತಿದ್ದು ಒಟ್ಟು₹ 11.75 ಲಕ್ಷ ಬರಲಿದೆ. ಮಾಸಿಕ ಪಿಂಚಣಿ₹ 1,500 ಬರಬಹುದು. ಖಾಸಗಿ ಸಿದ್ಧ ಉಡುಪು ಕಾರ್ಖನೆಯಲ್ಲಿ ಕೆಲಸ. ಅಂಗವಿಕಲರ ಸರ್ಕಾರದ ಕೊಡುಗೆ₹ 1400. ಈತ ತೆರಿಗೆಗೆ ಒಳಪಡುತ್ತಾನೆಯೇ. ಬರುವ ಹಣ ಎಲ್ಲಿ ಹೂಡಲಿ.

ಉತ್ತರ: ನೀವು ಆರಿಸಿಕೊಂಡ ಎರಡೂ ಬ್ಯಾಂಕುಗಳು ಭದ್ರವಾಗಿದ್ದು, ನಿವೃತ್ತಿಯಿಂದ ಬರುವ ಹಣ ಅಲ್ಲಿಯೇ ಇರಿಸಿ, ಮಾಸಿಕ ಬಡ್ಡಿ ಪಡೆಯಲಿ. ಇವರು ತೆರಿಗೆಗೆ ಒಳಗಾಗುವುದಿಲ್ಲ. ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಉತ್ತಮ ವರಮಾನ ಬರುತ್ತಿದ್ದರೆ ಅಲ್ಲಿಯೇ ಮುಂದುವರಿಸಿರಿ. ಲಾಭ ಬಾರದಿರುವಲ್ಲಿ ಬ್ಯಾಂಕ್‌ ಠೇವಣಿಯನ್ನೇ ಆರಿಸಿಕೊಳ್ಳಿ.

ಕೃಷ್ಣಮೂರ್ತಿ, ಬೆಂಗಳೂರು

ನನ್ನ ವಯಸ್ಸು 85. ಮಾಸಿಕ ಪಿಂಚಣಿ₹ 47,486, ಠೇವಣಿ ಮೇಲಿನ ಬಡ್ಡಿ₹ 56,000. ನಾನು IT Return ಸಲ್ಲಿಸಬೇಕೇ ತಿಳಿಸಿರಿ.

ಉತ್ತರ: 2018–19, 2019–20 ಈ ಎರಡೂ ವರ್ಷಗಳಲ್ಲಿ ನಿಮಗಿರುವ ಗರಿಷ್ಠ ವಾರ್ಷಿಕ ಆದಾಯದ ಮಿತಿ₹ 5 ಲಕ್ಷ. ನಿಮ್ಮ ಒಟ್ಟು ಆದಾಯದಲ್ಲಿ ಸೆಕ್ಷನ್ 80 TTB ಆಧಾರದ ಮೇಲೆ ಬ್ಯಾಂಕ್ ಠೇವಣಿಯಲ್ಲಿ ಗರಿಷ್ಠ₹ 50,000 ವಿನಾಯ್ತಿ ಪಡೆಯಬಹುದು. ಸೆಕ್ಷನ್ 16 ಆಧಾರದ ಮೇಲೆ 2018–19 ರಲ್ಲಿ₹ 40,000, 2019–20 ರಲ್ಲಿ₹ 50,000 ವಿನಾಯ್ತಿ ಪಡೆಯಬಹುದು. ನೀವು ರಿಟರ್ನ್ ತುಂಬಲೇ ಬೇಕು.

ಪ್ರಭಾಕರಗೌಡ, ತೀರ್ಥಹಳ್ಳಿ

ನಾನು ನನ್ನ ಹೆಂಡತಿ ಈರ್ವರೂ ಹಿರಿಯ ನಾಗರಿಕರು. ನಮ್ಮ ಕೃಷಿ ಆದಾಯದಿಂದ ನನ್ನ ಮಗಳ ಮಕ್ಕಳಿಗೆ ಕ್ರಮವಾಗಿ₹ 1.50 ಲಕ್ಷ ಹಾಗೂ₹ 50,000 ಅಂಚೆ ಕಚೇರಿಯಲ್ಲಿ ತೊಡಗಿಸಿದ್ದೇನೆ. ಗರಿಷ್ಠ ಎಷ್ಟು ತೊಡಗಿಸಬಹುದು. ದ್ವಿಗುಣವಾಗಲು ಎಷ್ಟು ವರ್ಷ ಬೇಕಾದೀತು ತೆರಿಗೆ ಬರುತ್ತದೆಯೇ?

ಉತ್ತರ: ನೀವು ಎನ್‌ಎಸ್‌ಇ ಅಥವಾ ಕಿಸಾಸ್ ವಿಕಾಸ್ ಪತ್ರ ಕೊಳ್ಳಿರಿ. ಇಲ್ಲಿ ಗರಿಷ್ಠ ಹೂಡಿಕೆ ಎನ್ನುವುದಿಲ್ಲ. ಎಷ್ಟು ಬೇಕಾದರೂ ಮಾಡಬಹುದು. ಈ ಠೇವಣಿಯ ಬಡ್ಡಿಗೆ ತೆರಿಗೆ ವಿನಾಯಿತಿ ಇಲ್ಲವಾದರೂ, ಠೇವಣಿ ಇರಿಸಿದ ಹಣದಿಂದ ಬರುವ ಬಡ್ಡಿಗೆ ತೆರಿಗೆ ಬರುವುದಿಲ್ಲ. ಕಿಸಾನ್ ವಿಕಾಸ್ ಪತ್ರ 113 ತಿಂಗಳಲ್ಲಿ ದ್ವಿಗುಣವಾಗುತ್ತದೆ. ಎನ್‌ಎಸ್‌ಇಯಲ್ಲಿ ದ್ವಿಗುಣವಾಗುವ ಯೋಜನೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.