
ಮುಂಬೈ: ದೇಶಿ ವಾಯು ಮಾರ್ಗಗಳಲ್ಲಿ ಜನವರಿ ತಿಂಗಳಿನಲ್ಲಿ 1.52 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
2025ರ ಜನವರಿಯಲ್ಲಿ 1.46 ಕೋಟಿ ಪ್ರಯಾಣಿಕರು ಸಂಚಾರ ಮಾಡಿದ್ದರು. ಇದಕ್ಕೆ ಹೋಲಿಸಿದರೆ ಈ ಬಾರಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 4.36ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಡಿಸೆಂಬರ್ ತಿಂಗಳಿನಲ್ಲಿ ದೇಶಿ ವಿಮಾನಯಾನ ಕಂಪನಿ ಇಂಡಿಗೊದಲ್ಲಿ ಪೈಲಟ್‌ಗಳ ಕೆಲಸ ಮತ್ತು ವಿಶ್ರಾಂತಿ ಅವಧಿಗೆ ಸಂಬಂಧಿಸಿದಂತೆ ಉಂಟಾದ ಅಡಚಣೆಯಿಂದ ಕಂಪನಿಯ ಮಾರುಕಟ್ಟೆ ಪಾಲು ಶೇ 4ರಷ್ಟು ಇಳಿದಿತ್ತು. ಆದರೆ, ಜನವರಿಯಲ್ಲಿ ಕಂಪನಿಯ ಪಾಲು ಏರಿಕೆ ಕಂಡಿದ್ದು, ಶೇ 63.6ರಷ್ಟಾಗಿದೆ. ಈ ಕಂಪನಿಯ ವಿಮಾನಗಳಲ್ಲಿ 97.04 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ.
ಏರ್ ಇಂಡಿಯಾ ಸಮೂಹ ಶೇ 26.5ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, 40 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ.
ಜನವರಿಯಲ್ಲಿ ವಿಮಾನ ಟಿಕೆಟ್ ರದ್ದು ಮಾಡಿಕೊಳ್ಳುವ ಪ್ರಮಾಣ ಶೇ 1.44ರಷ್ಟಿತ್ತು. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ, ಬೆಂಗಳೂರು ಮತ್ತು ಹೈದರಾಬಾದ್‌ನ ವಿಮಾನ ನಿಲ್ದಾಣಗಳಿಂದ ಎಲ್ಲ ದೇಶಿ ವಿಮಾನಯಾನ ಕಂಪನಿಗಳ ಪೈಕಿ ಇಂಡಿಗೊ ಶೇ 70.9ರಷ್ಟು ಸಮಯ ಪಾಲನೆಯೊಂದಿಗೆ ಅತ್ಯುತ್ತಮ ಕಾರ್ಯಕ್ಷಮತೆ ನೀಡಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.