ADVERTISEMENT

ಆರ್‌ಬಿಐನ ಹೆಚ್ಚುವರಿ ನಿಧಿ ಬೇಡ: ಸಚಿವ ಅರುಣ್‌ ಜೇಟ್ಲಿ

ಪಿಟಿಐ
Published 24 ನವೆಂಬರ್ 2018, 17:18 IST
Last Updated 24 ನವೆಂಬರ್ 2018, 17:18 IST
ಜೇಟ್ಲಿ
ಜೇಟ್ಲಿ   

ನವದೆಹಲಿ: ‘ವಿತ್ತೀಯ ಶಿಸ್ತು ಕಾಯ್ದುಕೊಳ್ಳಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಥವಾ ಇನ್ಯಾವುದೇ ಸಂಸ್ಥೆಯಿಂದ ಹೆಚ್ಚುವರಿ ನಿಧಿಯ ಅಗತ್ಯ ಸರ್ಕಾರಕ್ಕೆ ಇಲ್ಲ’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

‘ಇನ್ನು ಆರು ತಿಂಗಳವರೆಗೆ ಹಣ ನೀಡುವಂತೆಯೂ ಆರ್‌ಬಿಐ ಅನ್ನು ಕೇಳುವುದಿಲ್ಲ ಎಂದು ಟೈಮ್ಸ್‌ ನೌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿವಿತ್ತೀಯ ಕೊರತೆಯನ್ನು ಶೇ 3.3ರಲ್ಲಿ ನಿಯಂತ್ರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ,ಇದಕ್ಕಾಗಿ ಆರ್‌ಬಿಐ ಅಥವಾ ಯಾವುದೇ ಹಣಕಾಸು ಸಂಸ್ಥೆಯಿಂದ ಹೆಚ್ಚುವರಿ ಹಣ ಪಡೆಯುವ ಉದ್ದೇಶ ಸರ್ಕಾರಕ್ಕೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಕೇಂದ್ರ ಸರ್ಕಾರ ವಿತ್ತೀಯ ಕೊರತೆ ನಿಯಂತ್ರಿಸಲು ಆರ್‌ಬಿಐ ಬಳಿ ಇರುವ ಹೆಚ್ಚುವರಿ ಮೀಸಲು ಸಂಗ್ರಹವನ್ನು ಬಳಸಿಕೊಳ್ಳಲು ಮುಂದಾಗಿದೆ ಎನ್ನುವ ಟೀಕೆಗಳಿಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

‘ಜಾಗತಿಕ ಮಟ್ಟದಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಯಾವ ಪ್ರಮಾಣದಲ್ಲಿ ಮೀಸಲು ಹೊಂದಬಹುದು ಎನ್ನುವುದಕ್ಕೆ ರೂಪುರೇಷೆ ಹೊಂದಿವೆ. ಅಂತೆಯೇ ಆರ್‌ಬಿಐನಮೀಸಲು ನಿಧಿಯ ಸೂಕ್ತ ಪ್ರಮಾಣ ನಿರ್ಧಾರವಾಗಬೇಕು ಎಂದು ನಾವುಬಯಸುತ್ತಿದ್ದೇವೆ.

‘ಆರ್‌ಬಿಐನ ಹೊಸ ಬಂಡವಾಳ ನೀತಿಯಿಂದ ಬರುವ ಹೆಚ್ಚುವರಿ ನಿಧಿಯನ್ನು ಯಾವಾಗಲೂ ಬಡತನ ನಿರ್ಮೂಲನೆ ಕಾರ್ಯಕ್ರಮಕ್ಕೆ
ಬಳಸಲಾಗುತ್ತಿದೆ.

‘ಕಾನೂನಿನ ಚೌಕಟ್ಟಿನಡಿ ಆರ್‌ಬಿಐನ ಸ್ವಾಯತ್ತೆಯನ್ನು ಗೌರವಿಸಲಾಗುವುದು. ಕೆಲವು ವಲಯಗಳು ನಗದು ಕೊರತೆ ಸಮಸ್ಯೆ ಎದುರಿಸಿದರೆ ಅದನ್ನು ಬಗೆಹರಿಸುವಂತೆ ಆರ್‌ಬಿಐ ಅನ್ನು ಕೇಳುತ್ತೇವೆ. ಏಕೆಂದರೆ ಕೆಲವು ವಿಷಯಗಳನ್ನು ನಿರ್ಧರಿಸುವ ಅಧಿಕಾರವನ್ನು ಆರ್‌ಬಿಐ ಹೊಂದಿದೆ’ ಎಂದು ಸಚಿವ ಜೇಟ್ಲಿ ಪ್ರತಿಕ್ರಿಯಿಸಿದ್ದಾರೆ.

ಆರ್‌ಬಿಐನ ಮೀಸಲುನಿಧಿಯ ಸೂಕ್ತ ಪ್ರಮಾಣ ನಿರ್ಧರಿಸಲು ನಿರ್ದೇಶಕ ಮಂಡಳಿ ರಚಿಸಲು ಉದ್ದೇಶಿಸಿರುವ ಪರಿಣತರ ಸಮಿತಿ ಶೀಘ್ರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ.

ಸಮಿತಿಯು ಯಾವ ವಿಷಯಗಳ ಬಗ್ಗೆ ವರದಿ ನೀಡಬೇಕು ಮತ್ತು ಸಮಿತಿಗೆ ಯಾರನ್ನು ನೇಮಕ ಮಾಡಬೇಕು ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತುಆರ್‌ಬಿಐಜಂಟಿಯಾಗಿಯೇ ನಿರ್ಧರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.