ADVERTISEMENT

ಉಕ್ಕು, ಅಲ್ಯೂಮಿನಿಯಂಗೆ ಸುಂಕ ಏರಿಸಲು ಟ್ರಂಪ್‌ ನಿರ್ಧಾರ: ಭಾರತಕ್ಕೆ ಆಘಾತ

ಪಿಟಿಐ
Published 31 ಮೇ 2025, 16:14 IST
Last Updated 31 ಮೇ 2025, 16:14 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತವು ಉಕ್ಕು ಮತ್ತು ಅಲ್ಯೂಮಿನಿಯಂ ಮೇಲಿನ ಸುಂಕವನ್ನು ದುಪ್ಪಟ್ಟುಗೊಳಿಸಲು ಮುಂದಾಗಿದೆ. ಈ ನಿರ್ಧಾರವು ಭಾರತದ ರಫ್ತುದಾರರ ಮೇಲೆ ಪರಿಣಾಮ ಬೀರಲಿದೆ. ಅವರ ಆದಾಯಕ್ಕೂ ಪೆಟ್ಟು ನೀಡಲಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್‌ ಇನಿಷಿಯೇಟಿವ್ (ಜಿಟಿಆರ್‌ಐ) ಹೇಳಿದೆ.

ಸದ್ಯ ಉಕ್ಕು ಮತ್ತು ಅಲ್ಯೂಮಿನಿಯಂ ಆಮದು ಮೇಲೆ ಶೇ 25ರಷ್ಟು ಸುಂಕ ವಿಧಿಸಲಾಗುತ್ತಿದೆ. ಜೂನ್‌ 4ರಿಂದ ಜಾರಿಗೆ ಬರುವಂತೆ ಇದನ್ನು ಶೇ 50ಕ್ಕೆ ಹೆಚ್ಚಿಸುವುದಾಗಿ ಟ್ರಂಪ್‌ ಘೋಷಿಸಿದ್ದಾರೆ.

ಅಮೆರಿಕದ ವ್ಯಾಪಾರ ವಿಸ್ತರಣೆ ಕಾಯ್ದೆ 1962ರ ಅಡಿ ರಾಷ್ಟ್ರೀಯ ಭದ್ರತೆಗೆ ಅಪಾಯವೊಡ್ಡುವ ಆಮದು ಸರಕುಗಳ ಮೇಲೆ ಸುಂಕ ಹೆಚ್ಚಿಸುವ ಅಧಿಕಾರವು ಅಧ್ಯಕ್ಷರಿಗೆ ಇದೆ. ಇದರ ಅನ್ವಯ ಸುಂಕ ದುಪ್ಪಟ್ಟುಗೊಳಿಸಲು ಟ್ರಂಪ್‌ ಮುಂದಾಗಿದ್ದಾರೆ.

ADVERTISEMENT

ಟ್ರಂಪ್‌ ಅವರು 2018ರಲ್ಲಿ ಉಕ್ಕಿನ ಮೇಲೆ ಶೇ 25ರಷ್ಟು ಮತ್ತು ಅಲ್ಯೂಮಿನಿಯಂ ಮೇಲೆ ಶೇ 10ರಷ್ಟು ಸುಂಕ ವಿಧಿಸಿದ್ದರು. ಪ್ರಸಕ್ತ ವರ್ಷದ ಫೆಬ್ರುವರಿಯಲ್ಲಿ ಅಲ್ಯೂಮಿನಿಯಂ ಮೇಲಿನ ಸುಂಕವನ್ನು ಶೇ 25ಕ್ಕೆ ಹೆಚ್ಚಿಸಿದ್ದರು. 

2024–25ರಲ್ಲಿ ಭಾರತವು ₹39 ಸಾವಿರ ಕೋಟಿ ಮೌಲ್ಯದ ಕಬ್ಬಿಣ, ಉಕ್ಕು ಮತ್ತು ಅಲ್ಯೂಮಿನಿಯಂ ಸರಕುಗಳನ್ನು ಅಮೆರಿಕಕ್ಕೆ ರಫ್ತು ಮಾಡಿದೆ. 

‘ಟ್ರಂಪ್‌ ಆಡಳಿತದ ನಿರ್ಧಾರವು ಭಾರತದ ಮೇಲೆ ನೇರ ಪರಿಣಾಮ ಬೀರಲಿದೆ’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.

‘ಟ್ರಂಪ್‌ ಆಡಳಿತವು ಸುಂಕ ಹೆಚ್ಚಿಸುವುದಕ್ಕೆ ಪ್ರತಿಯಾಗಿ ಭಾರತವು ಅಮೆರಿಕದಿಂದ ಆಮದಾಗುವ ಸರಕುಗಳ ಮೇಲಿನ ಸುಂಕವನ್ನು ಒಂದು ತಿಂಗಳೊಳಗೆ ಹೆಚ್ಚಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.