ADVERTISEMENT

ಸುಲಲಿತ ವಹಿವಾಟು: ಜೂನ್‌ 30ಕ್ಕೆ ರಾಜ್ಯಗಳ ಶ್ರೇಯಾಂಕ ವರದಿ

ಪಿಟಿಐ
Published 26 ಜೂನ್ 2022, 10:52 IST
Last Updated 26 ಜೂನ್ 2022, 10:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸುಲಲಿತ ಉದ್ದಿಮೆ ವಹಿವಾಟಿಗೆ ಸಂಬಂಧಿಸಿದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕದ ವಿವರವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇದೇ 30ರಂದು ಬಿಡುಗಡೆ ಮಾಡಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2020ರ ವಹಿವಾಟು ಸುಧಾರಣಾ ಕ್ರಿಯಾ ಯೋಜನೆಯಲ್ಲಿ (ಬಿಆರ್‌ಎಪಿ) ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಾರ್ಷಿಕ ಸುಧಾರಣಾ ಕ್ರಮಗಳ ಪರಿಶೀಲನಾ ವರದಿಯನ್ನು ಜೂನ್‌ 30ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದೇಶಿ ಮತ್ತು ಜಾಗತಿಕ ಹೂಡಿಕೆದಾರರಿಗೆ ಪೂರಕ ವಾತಾವರಣ ಕಲ್ಪಿಸುವಲ್ಲಿ ರಾಜ್ಯಗಳ ಮಧ್ಯೆ ಪೈಪೋಟಿ ಏರ್ಪಡಿಸುವುದು ಶ್ರೇಯಾಂಕ ನೀಡುವುದರ ಮೂಲ ಉದ್ದೇಶ.

ನಿರ್ಮಾಣ ಪರವಾನಗಿ, ಕಾರ್ಮಿಕರ ನಿಯಂತ್ರಣ ಕಾಯ್ದೆ, ಪರಿಸರ ಪರವಾನಗಿ, ಭೂಮಿ ಲಭ್ಯತೆ ಮತ್ತು ಏಕಗವಾಕ್ಷಿ ವ್ಯವಸ್ಥೆ ಸೇರಿದಂತೆ ಇನ್ನೂ ಹಲವು ಅಂಶಗಳನ್ನು ಪರಿಗಣಿಸಿ ಸ್ಥಾನಮಾನ ನಿರ್ಧರಿಸಲಾಗುತ್ತದೆ. ಕೈಗಾರಿಕಾ ಉತ್ತೇಜನೆ ಮತ್ತು ಆಂತರಿಕ ವ್ಯಾಪಾರ ಇಲಾಖೆಯು (ಡಿಪಿಐಐಟಿ) ಬಿಆರ್‌ಎಪಿ ಅಡಿಯಲ್ಲಿ ರಾಜ್ಯಗಳು ಕೈಗೊಂಡಿರುವ ವಾರ್ಷಿಕ ಸುಧಾರಣಾ ಕ್ರಮಗಳನ್ನು ಪರಿಶೀಲನೆ ನಡೆಸಿ ಸ್ಥಾನಮಾನ ನೀಡುತ್ತದೆ.

2020ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದ ವರದಿಯ ಪ್ರಕಾರ, ಸುಲಲಿತ ವಹಿವಾಟು ಶ್ರೇಯಾಂಕದಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನ ಪಡೆದಿತ್ತು. ಕರ್ನಾಟಕ 17ನೇ ಸ್ಥಾನ ಪಡೆದುಕೊಂಡಿತ್ತು.

ಈವರೆಗೆ 2015, 2016,2017–18 ಮತ್ತು 2019ಕ್ಕೆ ಸಂಬಂಧಿಸಿದಂತೆ ರಾಜ್ಯಗಳ ಶ್ರೇಯಾಂಕ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.