ADVERTISEMENT

ಆರ್ಥಿಕತೆಗೆ ₹ 4.5 ಲಕ್ಷ ಕೋಟಿ ನೆರವು ಅಗತ್ಯ: ಕೇಂದ್ರಕ್ಕೆ ಫಿಕ್ಕಿ ಪತ್ರ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ‘ಫಿಕ್ಕಿ’ ಮನವಿ

ಏಜೆನ್ಸೀಸ್
Published 11 ಮೇ 2020, 19:45 IST
Last Updated 11 ಮೇ 2020, 19:45 IST
   

ನವದೆಹಲಿ: ಕೋವಿಡ್‌ ಬಾಧಿತ ಆರ್ಥಿಕತೆಗೆ ತಕ್ಷಣಕ್ಕೆ ₹ 4.5 ಲಕ್ಷ ಕೋಟಿ ಮೊತ್ತದ ನೆರವಿನ ಅಗತ್ಯ ಇರುವುದನ್ನು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟವು (ಫಿಕ್ಕಿ) ಕೇಂದ್ರ ಸರ್ಕಾರದ ಗಮನಕ್ಕೆ ತಂದಿದೆ.

ಸರ್ಕಾರದ ಇತರ ಪಾವತಿ ಮತ್ತು ಮರುಪಾವತಿ ರೂಪದಲ್ಲಿ ₹ 2.5 ಲಕ್ಷ ಕೋಟಿ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಂಡರೂ, ಹೆಚ್ಚುವರಿಯಾಗಿ ₹ 4.5 ಲಕ್ಷ ಕೋಟಿ ನೆರವು ಬೇಕಾಗಿದೆ ಎಂದು ‘ಫಿಕ್ಕಿ’, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದು ತಿಳಿಸಿದೆ.

ಜಾಗತಿಕ ಸರಕುಗಳ ಪೂರೈಕೆ ಸರಪಳಿಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವುದರಿಂದ ಒದಗಿ ಬಂದಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ನಿರ್ಮಾಣ, ತಯಾರಿಕೆ ಘಟಕಗಳ ಸ್ಥಾಪನೆಗೆ ಪ್ರತ್ಯೇಕ ನಿಧಿಯ ಅಗತ್ಯ ಇದೆ. ಈ ನಿಧಿಯ ನೆರವನ್ನು ಕಂತುಗಳಲ್ಲಿ ಒದಗಿಸಬಹುದು ಎಂದು ’ಫಿಕ್ಕಿ’ ಅಧ್ಯಕ್ಷೆ ಸಂಗೀತಾ ರೆಡ್ಡಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಆರ್ಥಿಕತೆಯಲ್ಲಿ ಹಣದ ತೀವ್ರ ಕೊರತೆ ಎದುರಾಗಿದೆ. ಸರ್ಕಾರ ಪಾವತಿಸಬೇಕಾಗಿರುವ ಮತ್ತು ಮರುಪಾವತಿ ಮಾಡಬೇಕಾಗಿರುವ ₹ 2.5 ಲಕ್ಷ ಕೋಟಿಯನ್ನು ತಕ್ಷಣಕ್ಕೆ ಬಿಡುಗಡೆ ಮಾಡಿದರೆ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ. ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ತಯಾರಿಕೆಯ ಹಳಿಗೆ ಮರಳಲು ಕೂಡ ಹಣಕಾಸಿನ ಬೆಂಬಲ ಅಗತ್ಯವಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ವಿತ್ತೀಯ ಕೊರತೆ ಶೇ 5.8ಕ್ಕೆ?

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ೊಟ್ಟು ಆಂತರಿಕ ಉತ್ಪನ್ನದ (ಡಿಜಿಪಿ) ಬಜೆಟ್‌ ಅಂದಾಜಿಗಿಂತ (ಶೇ 3.5) ಹೆಚ್ಚಾಗಿ ಶೇ 5.8ಕ್ಕೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಕೇಂದ್ರ ಸರ್ಕಾರವು ಮಾರುಕಟ್ಟೆಯಿಂದ ಸಂಗ್ರಹಿಸುವ ಸಾಲದ ಮೊತ್ತವನ್ನು ₹ 4.2 ಲಕ್ಷ ಕೋಟಿಗೆ ಹೆಚ್ಚಿಸಲು ನಿರ್ಧರಿಸಿದೆ. ಇದರಿಂದ ವಿತ್ತೀಯ ಕೊರತೆಯು ಹೆಚ್ಚಲಿದೆ ಎಂದು ಬ್ಯಾಂಕ್‌ ಆಫ್‌ ಅಮೆರಿಕದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ವಿತ್ತೀಯ ಕೊರತೆ ಹೆಚ್ಚಳದಿಂದ ಆರ್ಥಿಕ ಸ್ಥಿರತೆಗೆ ಧಕ್ಕೆ ಒದಗಲಿದೆ ಎನ್ನುವ ಆತಂಕ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ, ಸದ್ಯದ ಸಂದರ್ಭದಲ್ಲಿ ಸರ್ಕಾರದ ವೆಚ್ಚ ಹೆಚ್ಚಳಗೊಳ್ಳಬೇಕು ಎಂದು ಅನೇಕ ಪರಿಣತರು ಪ್ರತಿಪಾದಿಸುತ್ತಿದ್ದಾರೆ.

ಅಂಕಿ ಅಂಶಗಳು

3.5 %:ವಿತ್ತೀಯ ಕೊರತೆಯ ಬಜೆಟ್‌ ಅಂದಾಜು

5.8 %: ಸರ್ಕಾರಿ ವೆಚ್ಚ ಹೆಚ್ಚಳದಿಂದ ವಿತ್ತೀಯ ಕೊರತೆ ಏರಿಕೆ

0.5 %: ಆರ್ಥಿಕ ವೃದ್ಧಿ ದರ ಕುಸಿತದ ಸಾಧ್ಯತೆ

0.5 ರಿಂದ 1 %: ರಾಜ್ಯಗಳ ವಿತ್ತೀಯ ಕೊರತೆ ಹೆಚ್ಚಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.