ಬೆಂಗಳೂರು: ಜಾಗತಿಕ ವೇದಿಕೆಯಲ್ಲಿ ಕರ್ನಾಟಕದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಒತ್ತು ನೀಡುವುದಾಗಿ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಕರ್ನಾಟಕದ ಅಧ್ಯಕ್ಷ ರಬೀಂದ್ರ ಶ್ರೀಕಂಠನ್ ಹೇಳಿದ್ದಾರೆ.
ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಕರ್ನಾಟಕದ ಸ್ಪರ್ಧಾತ್ಮಕತೆ ಹೆಚ್ಚಳ: ಜಾಗತೀಕರಣ, ಒಳಗೊಳ್ಳುವಿಕೆ, ಸುಸ್ಥಿರತೆ, ವಿಶ್ವಾಸ’ ಕುರಿತಂತೆ ರಾಜ್ಯದ ಸ್ಪರ್ಧಾತ್ಮಕತೆ ಹೆಚ್ಚಿಸುವ ನೀಲನಕ್ಷೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮುಂತಾದ ನಗರಗಳನ್ನು ಕೇಂದ್ರೀಕರಿಸಿ ಉತ್ತರ ಕರ್ನಾಟಕವನ್ನು ಬಲಪಡಿಸುವ ಗುರಿಯನ್ನು ನೀಲನಕ್ಷೆ ಒಳಗೊಂಡಿದೆ. ಕಲ್ಯಾಣ ಕರ್ನಾಟಕದಲ್ಲಿನ ಕೈಗಾರಿಕೆಗಳ ಅಭಿವೃದ್ಧಿಗೆ ಕಲಬುರಗಿಯಲ್ಲಿ ಕಚೇರಿ ಸ್ಥಾಪನೆ ಮಾಡಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಂಧನ, ಎಂಎಸ್‌ಎಂಇಗಳ ಸಾಮರ್ಥ್ಯ ಹೆಚ್ಚಿಸುವುದು, ಕೃತಕ ಬುದ್ಧಿಮತ್ತೆ ಆಧಾರಿತ ಪರಿವರ್ತನೆ, ಸೆಮಿಕಂಡಕ್ಟರ್‌ಗಳು, ಸೌರ ಯೋಜನೆಗಳು, ಮೂಲಸೌಕರ್ಯ ಸೇರಿ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದಕ್ಕಾಗಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಕರ್ನಾಟಕದ ಥೀಮ್ ಹೊಂದಲಾಗಿದೆ ಎಂದರು.
ಜಿಎಸ್‌ಟಿ, ತೆರಿಗೆ ಸರಳೀಕರಣ, ಸರಳವಾಗಿ ಉದ್ಯಮ ನಡೆಸಲು ನೀತಿಗಳನ್ನು ಅನುಸರಿಸುವುದು, ಸಮತೋಲನದ ಕೈಗಾರಿಕಾ ಅಭಿವೃದ್ಧಿಗೆ ಮೂಲಸೌಕರ್ಯ ಮತ್ತು ಸಂಪರ್ಕದ ಸುಧಾರಣೆಗಳನ್ನು ಆದ್ಯತೆಗಳಾಗಿವೆ ಎಂದರು.
ಸಿಐಐ ಕರ್ನಾಟಕದ ಉಪಾಧ್ಯಕ್ಷ ಗುರುಪ್ರಸಾದ್ ಮುದ್ಲಾಪುರ್, ಸಿಐಐ ಕರ್ನಾಟಕದ ನಿರ್ದೇಶಕಿ ರಾಧಿಕಾ ಧಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.