ADVERTISEMENT

Electric Bus: 10 ಸಾವಿರ ಎಲೆಕ್ಟ್ರಿಕ್‌ ಬಸ್‌ ಹಂಚಿಕೆ; ಕೇಂದ್ರಕ್ಕೆ ಪ್ರಸ್ತಾವ

ಕರ್ನಾಟಕಕ್ಕೆ ಸೌಲಭ್ಯ ನೀಡಲು ಕ್ರಮ: ಕೇಂದ್ರ ಸಚಿವ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಮೇ 2025, 0:30 IST
Last Updated 17 ಮೇ 2025, 0:30 IST
ರಾಮಲಿಂಗಾ ರೆಡ್ಡಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಚರ್ಚಿಸಿದರು 
ರಾಮಲಿಂಗಾ ರೆಡ್ಡಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಚರ್ಚಿಸಿದರು    

ನವದೆಹಲಿ: ಕೇಂದ್ರ ಸರ್ಕಾರ ಪ್ರಾಯೋಜಿತ ಪಿಎಂ ಇ-ಡ್ರೈವ್ ಉಪಕ್ರಮದ ಅಡಿ 10 ಸಾವಿರ ಎಲೆಕ್ಟ್ರಿಕ್‌ ಬಸ್‌ಗಳನ್ನು ಹಂಚಿಕೆ ಮಾಡುವಂತೆ ಕೋರಿ ಕರ್ನಾಟಕ ಸರ್ಕಾರವು, ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯಕ್ಕೆ ಶುಕ್ರವಾರ ಪ್ರಸ್ತಾವ ಸಲ್ಲಿಸಿದೆ. 

ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತಮಪಡಿಸುವ ಅಗತ್ಯ ಉಲ್ಲೇಖಿಸಿ ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಕೇಂದ್ರದ ಬೃಹತ್‌ ಕೈಗಾರಿಕೆ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರಸ್ತಾವ ಸಲ್ಲಿಸಿದರು.

ರಾಜ್ಯಕ್ಕೆ ಹಂತ ಹಂತವಾಗಿ 4,500 ಬಸ್‌ಗಳನ್ನು ಮಂಜೂರು ಮಾಡುವ ಬಗ್ಗೆ ಸಚಿವರು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ. 

ADVERTISEMENT

ಕರ್ನಾಟಕ ಸರ್ಕಾರಕ್ಕೆ ಕೇಂದ್ರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ ಸಚಿವ ಕುಮಾರಸ್ವಾಮಿ, ‘ವಿದ್ಯುತ್‌ ಚಾಲಿತ ಬಸ್‌‌ಗಳ ಹಂಚಿಕೆ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ. ಕರ್ನಾಟಕಕ್ಕೆ ಹಂತ ಹಂತವಾಗಿ ಮತ್ತು ಆದ್ಯತೆ ಮೇರೆಗೆ ವಿದ್ಯುತ್ ಚಾಲಿತ ಬಸ್‌ಗಳನ್ನು ಹಂಚಿಕೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಪಿಎಂ ಇ–ಡ್ರೈವ್ ಉಪಕ್ರಮದಡಿ 9 ಪ್ರಮುಖ ನಗರಗಳಿಗೆ 14,000 ವಿದ್ಯುತ್‌ ಚಾಲಿತ ಬಸ್‌ಗಳನ್ನು ಹಂಚಿಕೆ ಮಾಡಲಾಗುವುದು. ಚಾರ್ಜಿಂಗ್ ಸ್ಟೇಷನ್‌, ಬಸ್ ಡಿಪೊಗಳು ಮತ್ತು ವಾಹನ ನಿರ್ವಹಣಾ ವ್ಯವಸ್ಥೆ ಸೇರಿ ಸಂಬಂಧಿತ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಚರ್ಚಿಸಿವೆ. ಈ ಯೋಜನೆಯ ತ್ವರಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಪಿಎಂ ಇ-ಡ್ರೈವ್ ಉಪಕ್ರಮವು 14,028 ವಿದ್ಯುತ್‌ ಚಾಲಿತ ಬಸ್‌‌ಗಳೊಂದಿಗೆ ನಗರಗಳಲ್ಲಿ ವಾಯುಮಾಲಿನ್ಯ ರಹಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಎರಡು ವರ್ಷಗಳ ಅವಧಿಯಲ್ಲಿ ₹10,900 ಕೋಟಿ ವೆಚ್ಚ ಮಾಡಲಾಗುತ್ತಿದೆೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.