ADVERTISEMENT

ಎಲೆಕ್ಟ್ರಿಕ್‌ ವಾಹನ ನೋಂದಣಿ: ತುಸು ಇಳಿಕೆ

ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಳ * ಇಳಿಕೆಯಾದ ನಾಲ್ಕು ಚಕ್ರ ವಾಹನಗಳ ಖರೀದಿ

ಬಾಲಕೃಷ್ಣ ಪಿ.ಎಚ್‌
Published 15 ಡಿಸೆಂಬರ್ 2024, 21:41 IST
Last Updated 15 ಡಿಸೆಂಬರ್ 2024, 21:41 IST
ಎಲೆಕ್ಟ್ರಿಕ್‌ ಚಾರ್ಜಿಂಗ್‌
ಎಲೆಕ್ಟ್ರಿಕ್‌ ಚಾರ್ಜಿಂಗ್‌   

ಬೆಂಗಳೂರು: ಪರಿಸರಕ್ಕೆ ಪೂರಕವಾದ, ಇಂಧನ ವೆಚ್ಚವೂ ಕಡಿಮೆ ಇರುವ ಎಲೆಕ್ಟ್ರಿಕ್‌ ವಾಹನಗಳ ನೋಂದಣಿ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ 2024ರಲ್ಲಿ ತುಸು ಇಳಿಕೆಯಾಗಿದೆ.

2023ರಲ್ಲಿ ಏಪ್ರಿಲ್‌ 1ರಿಂದ ನವೆಂಬರ್‌ 30ರವರೆಗೆ 8.41 ಲಕ್ಷ ದ್ವಿಚಕ್ರವಾಹನಗಳು. 1.84 ಲಕ್ಷ ನಾಲ್ಕುಚಕ್ರ ವಾಹನಗಳು ನೋಂದಣಿಯಾಗಿದ್ದವು. 2024ರಲ್ಲಿ ಇದೇ ಅವಧಿಯಲ್ಲಿ 8.42 ಲಕ್ಷ ದ್ವಿಚಕ್ರವಾಹನಗಳು, 1.74 ಲಕ್ಷ ನಾಲ್ಕು ಚಕ್ರ ವಾಹನಗಳು ನೋಂದಣಿಯಾಗಿವೆ. ದ್ವಿಚಕ್ರ ವಾಹನಗಳು ಒಂದು ಸಾವಿರದಷ್ಟು ಅಧಿಕವಾಗಿದ್ದರೆ, ನಾಲ್ಕು ಚಕ್ರ ವಾಹನಗಳು 10 ಸಾವಿರದಷ್ಟು ಕಡಿಮೆಯಾಗಿವೆ.

‘ರಾಜ್ಯದಲ್ಲಿ 3.5 ಕೋಟಿ ವಾಹನಗಳಿದ್ದು, ಅದರಲ್ಲಿ ಶೇ 10ರಷ್ಟು ವಾಹನಗಳು ಎಲೆಕ್ಟ್ರಿಕ್‌ ಆಗಿವೆ. ಸಾವಿರ ಲೆಕ್ಕದಲ್ಲಿ ನೋಂದಣಿ ಹೆಚ್ಚಳ ಅಥವಾ ಕಡಿಮೆ ಇರುವುದು ಸಹಜ. ಈಗ ಪ್ರತಿವರ್ಷ 12 ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು, 2.75 ಲಕ್ಷಕ್ಕೂ ಅಧಿಕ ನಾಲ್ಕು ಚಕ್ರ ವಾಹನಗಳು ನೋಂದಣಿಯಾಗುತ್ತಿವೆ. ಇದು ಕಡಿಮೆ ಸಂಖ್ಯೆಯಲ್ಲ. ಕೆಲವೇ ವರ್ಷಗಳಲ್ಲಿ ಒಟ್ಟು ವಾಹನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆಯೇ ಅಧಿಕ ಇರಲಿದೆ’ ಎಂದು ಸಾರಿಗೆ ಇಲಾಖೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತೆರಿಗೆಯೇ ಇಲ್ಲ: ಬಸ್‌, ಆಟೊ, ಕಾರು ಸಹಿತ ವಾಣಿಜ್ಯ ಬಳಕೆಗೆ ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸಿದರೆ ಪ್ರತಿ ವರ್ಷ ತೆರಿಗೆ ಕಟ್ಟುವ ಪ್ರಮೇಯ ಕೂಡ ಇರುವುದಿಲ್ಲ. ಖರೀದಿ ಮಾಡುವಾಗಲೂ ₹25 ಲಕ್ಷಕ್ಕಿಂತ ಅಧಿಕ ಬೆಲೆಯ ಕಾರುಗಳಿಗೆ ಮಾತ್ರ ಒಟ್ಟು ಬೆಲೆಯ ಶೇ 10ರಷ್ಟು ಪಾವತಿ ಮಾಡಬೇಕಾಗುತ್ತದೆ ಎಂದು ಸಿ. ಮಲ್ಲಿಕಾರ್ಜುನ ಮಾಹಿತಿ ನೀಡಿದರು.

ಚಾರ್ಜಿಂಗ್ ಪಾಯಿಂಟ್‌: ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಪಾಯಿಂಟ್‌ನಲ್ಲಿ ದೇಶದಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. 5,765 ಚಾರ್ಜಿಂಗ್‌ ಪಾಯಿಂಟ್‌ಗಳಿದ್ದು, ಅದರಲ್ಲಿ ಬೆಂಗಳೂರಿನಲ್ಲಿಯೇ 4,462 ಇವೆ. ಬೆಸ್ಕಾಂ, ವಿವಿಧ ಖಾಸಗಿ ಸಂಸ್ಥೆಗಳು, ವಾಹನ ತಯಾರಿಕಾ ಕಂಪನಿಗಳು ಚಾರ್ಜಿಂಗ್‌ ಪಾಯಿಂಟ್‌ಗಳನ್ನು ನಿರ್ಮಿಸಿವೆ. ಇದಲ್ಲದೇ 2,500 ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಆರಂಭಿಸಲಾಗುವುದು ಎಂದು ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದೆ. ರಾಜ್ಯದ ವಿವಿಧ ನಗರಗಳಲ್ಲಿ ಅಲ್ಲದೇ ಮಂಗಳೂರು, ದಾವಣಗೆರೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ, ವಿವಿಧ ಪ್ರವಾಸಿ ತಾಣಗಳಲ್ಲಿಯೂ ಚಾರ್ಜಿಂಗ್ ಪಾಯಿಂಟ್‌ಗಳನ್ನು ಆರಂಭಿಸಿರುವುದು ಎಲೆಕ್ಟ್ರಿಕ್‌ ವಾಹನ ಸವಾರರಿಗೆ ಅನುಕೂಲವಾಗಿದೆ.

ಯೋಜನಾಬದ್ಧವಾಗಿ ಚಲಾಯಿಸಿ: ‘ಎಲೆಕ್ಟ್ರಿಕ್‌ ಕಾರುಗಳಲ್ಲಿ ದೂರದ ಪ್ರದೇಶಗಳಿಗೆ ಪ್ರಯಾಣಿಸುವುದು ಕಷ್ಟ ಎಂದು ಹಲವರು ಹೇಳುತ್ತಾರೆ. ಸರಿಯಾದ ಯೋಜನೆಗಳನ್ನು ಹಾಕಿಕೊಂಡರೆ ಎಷ್ಟು ದೂರ ಕೂಡ ಪ್ರಯಾಣಿಸಬಹುದು’ ಎಂದು ಎಲೆಕ್ಟ್ರಿಕ್‌ ಕಾರು ಜೊಂದಿರುವ ಲಗ್ಗೆರೆ ಪ್ರಶಾಂತ್‌ ಹೇಳಿದರು.

ಒಮ್ಮೆ ಚಾರ್ಜ್‌ ಮಾಡಿದರೆ ಎಲೆಕ್ಟ್ರಿಕ್‌ ಕಾರುಗಳಲ್ಲಿ ಕನಿಷ್ಠ 200 ಕಿ.ಮೀ. ಸಂಚರಿಸಬಹುದು. 300 ಕಿ.ಮೀ., 400 ಕಿ.ಮೀ. ಸಂಚರಿಸಿರಬಹುದಾದ ಕಾರುಗಳು ಕೂಡ ಬಂದಿವೆ. ಒಮ್ಮೆ ಚಾರ್ಜ್‌ ಮಾಡಿದಾಗ 200 ಕಿ.ಮೀ. ಸಂಚರಿಸುವ ಕಾರು ಮಾತ್ರ ನಮ್ಮಲ್ಲಿದ್ದರೆ ಮನೆಯಿಂದ ಹೊರಟರೆ 150ರಿಂದ 200 ಕಿ.ಮೀ. ನಡುವೆ ಎಲ್ಲಿ ಚಾರ್ಜಿಂಗ್‌ ಪಾಯಿಂಟ್‌ ಎಲ್ಲಿದೆ ಎಂದು ಗುರುತಿಸಿಕೊಂಡು, ಅಲ್ಲೇ ತಿಂಡಿ ತಿನ್ನುವ ಯೋಜನೆ ಹಾಕಿಕೊಳ್ಳಬೇಕು. ಆಗ ಅಲ್ಲಿ ಕಾರು ಚಾರ್ಜಿಂಗ್‌ಗೆ ಹಾಕಿ ಉಪಾಹಾರ ಮುಗಿಸಬಹುದು. ಮತ್ತೆ 150–200 ಕಿ.ಮೀ. ದೂರದಲ್ಲಿ ಊಟಕ್ಕೆ ಯೋಜನೆ ಹಾಕಿಕೊಳ್ಳಬೇಕು. ಈ ರೀತಿ ಮಾಡಿದರೆ ಎಷ್ಟು ದೂರ ಬೇಕಾದರೂ ಹೋಗಬಹುದು. ಈಗ ಸ್ಪೀಡ್‌ ಚಾರ್ಜರ್‌ ಇರುವುದರಿಂದ ಒಂದು ಗಂಟೆಯಲ್ಲಿ ಫುಲ್‌ಚಾರ್ಜ್‌ ಆಗುತ್ತದೆ’ ಎಂದು ಅವರು ವಿವರಣೆ ನೀಡಿದರು.

ಎಲೆಕ್ಟ್ರಿಕ್‌ ಬೈಕ್‌

ಎಲೆಕ್ಟ್ರಿಕ್‌ ವಾಹನಗಳ ಕಡೆಗೆ ಹೆಚ್ಚು ಆಸಕ್ತಿ

ಎಲೆಕ್ಟ್ರಿಕ್‌ ವಾಹನ ಖರೀದಿಸುವಾಗ ಪೆಟ್ರೋಲ್‌ ಡೀಸೆಲ್‌ ವಾಹನಗಳಿಗಿಂತ ಬೆಲೆ ಸ್ವಲ್ಪ ಅಧಿಕ ಇರಬಹುದು. ಆದರೆ ಒಮ್ಮೆ ಖರೀದಿಸಿದ ಬಳಿಕ ವೆಚ್ಚ ಬಹಳ ಕಡಿಮೆ ಇರುವುದರಿಂದ ಜನರು ಎಲೆಕ್ಟ್ರಿಕ್‌ ವಾಹನಗಳತ್ತ ವಾಲುತ್ತಿದ್ದಾರೆ. ಅಲ್ಲದೇ ರಾಜ್ಯದ ಎಲ್ಲ ಪಟ್ಟಣಗಳಲ್ಲಿ ಚಾರ್ಜಿಂಗ್‌ ಪಾಯಿಂಟ್‌ಗಳು ಇರುವುದರಿಂದ ಎಲೆಕ್ಟ್ರಿಕ್‌ ವಾಹನ ಖರೀದಿದಾರರಿಗೆ ಅನುಕೂಲವಾಗಿದೆ.

ಕಾರು ಬೈಕ್‌ಗಳಷ್ಟೇ ಅಲ್ಲದೇ ಎಲೆಕ್ಟ್ರಿಕ್‌ ಟ್ಯ್ರಾಕ್ಟರ್‌ ಬಸ್‌ಗಳು ಕೂಡ ಇವೆ. ಬಿಎಂಟಿಸಿ ಕೆಎಸ್‌ಆರ್‌ಟಿಸಿಯಲ್ಲಿ ಹಲವು ಎಲೆಕ್ಟ್ರಿಕ್‌ ಬಸ್‌ಗಳಿವೆ. ರೈತರು ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ಗಳನ್ನು ಖರೀದಿಸುತ್ತಿದ್ದಾರೆ. ಹಾಗಾಗಿ ಈ ಡಿಸೆಂಬರ್‌ ತಿಂಗಳ ಮೊದಲ 10 ದಿನಗಳಲ್ಲಿ 4749 ದ್ವಿಚಕ್ರವಾಹನಗಳು 2597 ನಾಲ್ಕುಚಕ್ರದ ವಾಹನಗಳು ನೋಂದಣಿಯಾಗಿವೆ. ಸಿ. ಮಲ್ಲಿಕಾರ್ಜುನ ಹೆಚ್ಚುವರಿ ಆಯುಕ್ತ ಸಾರಿಗೆ ಇಲಾಖೆ (ಪ್ರವರ್ತನ) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.