ADVERTISEMENT

ಇಲಾನ್ ಮಸ್ಕ್‌ಗೆ ₹88 ಲಕ್ಷ ಕೋಟಿ ವೇತನದ ಪ್ಯಾಕೇಜ್‌

ಏಜೆನ್ಸೀಸ್
Published 7 ನವೆಂಬರ್ 2025, 15:59 IST
Last Updated 7 ನವೆಂಬರ್ 2025, 15:59 IST
<div class="paragraphs"><p>ಇಲಾನ್ ಮಸ್ಕ್‌</p></div>

ಇಲಾನ್ ಮಸ್ಕ್‌

   

ನ್ಯೂಯಾರ್ಕ್‌: ಟೆಸ್ಲಾ ಕಂಪನಿಯ ಸಿಇಒ ಇಲಾನ್ ಮಸ್ಕ್‌ ಅವರಿಗೆ 1 ಟ್ರಿಲಿಯನ್ ಡಾಲರ್ (₹88 ಲಕ್ಷ ಕೋಟಿ) ಸ್ಟಾಕ್ ಪರಿಹಾರ ಪ್ಯಾಕೇಜ್ ನೀಡುವ ಪ್ರಸ್ತಾವಕ್ಕೆ ಕಂಪನಿಯ ಷೇರುದಾರರು ಬಹುಮತದ ಮೂಲಕ ಒಪ್ಪಿಗೆ ನೀಡಿದ್ದಾರೆ. 

ಈ ಪ್ಯಾಕೇಜ್‌ ಕಾರ್ಪೊರೇಟ್‌ ಇತಿಹಾಸದಲ್ಲಿಯೇ ದೊಡ್ಡದು ಎನ್ನಲಾಗಿದೆ. ಈ ಪ್ರಸ್ತಾವಕ್ಕೆ ಶೇ 75ರಷ್ಟು ಷೇರುದಾರರು ಅನುಮೋದನೆ ನೀಡಿದ್ದಾರೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ಕೃತಕ ಬುದ್ಧಿಮತ್ತೆ (ಎ.ಐ) ಮತ್ತು ರೊಬೊಟಿಕ್ಸ್‌ನಂತಹ ತಂತ್ರಜ್ಞಾನಗಳಲ್ಲಿ ಟೆಸ್ಲಾವನ್ನು ಮುನ್ನಡೆಸಲು ಮಸ್ಕ್ ಅವರ ಸೇವೆಯನ್ನು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಈ ಪ್ಯಾಕೇಜ್‌ಗೆ ಒಪ್ಪಿಗೆ ನೀಡಲಾಗಿದೆ. 

ಕಂಪನಿಯಲ್ಲಿ ಮಸ್ಕ್‌ ಅವರನ್ನು ಕನಿಷ್ಠ ಏಳೂವರೆ ವರ್ಷ ಉಳಿಸಿಕೊಳ್ಳುವ ಉದ್ದೇಶವನ್ನು ಈ ಪ್ಯಾಕೇಜ್‌ ಹೊಂದಿದೆ. ಇದು ಜಾರಿಯಾದರೆ ಪ್ರಸ್ತುತ ಕಂಪನಿಯಲ್ಲಿ ಶೇ 12ರಷ್ಟಿರುವ ಮಸ್ಕ್‌ ಪಾಲು ಶೇ 25ಕ್ಕಿಂತ ಹೆಚ್ಚಾಗಲಿದೆ.

ಈ ಪ್ರಸ್ತಾವವನ್ನು ಬೆಂಬಲಿಸುವಂತೆ ಟೆಸ್ಲಾ ಅಧ್ಯಕ್ಷ ರಾಬಿನ್ ಡೆನ್ಹೋಮ್ ಅವರು ಷೇರುದಾರರನ್ನು ಒತ್ತಾಯಿಸಿದ್ದರು. ಮಸ್ಕ್ ಅವರನ್ನು ಉಳಿಸಿಕೊಳ್ಳುವುದು ಟೆಸ್ಲಾದ ಭವಿಷ್ಯಕ್ಕೆ ಅತ್ಯಗತ್ಯ ಎಂದು ವಾದಿಸಿದರು. ಅವರು ನಿರ್ಗಮಿಸಿದರೆ ಕಂಪನಿಯ ಷೇರುಗಳು ಕುಸಿಯಬಹುದು ಎಂದು ಎಚ್ಚರಿಸಿದ್ದರು. 

ಈ ಪೂರ್ಣ ವೇತನ ಪ್ಯಾಕೇಜ್ ಪಡೆಯಲು ಮಸ್ಕ್‌, ಮಾರುಕಟ್ಟೆ ಬಂಡವಾಳೀಕರಣಕ್ಕೆ ಸಂಬಂಧಿಸಿದ 12 ಗುರಿಗಳನ್ನು ತಲುಪಬೇಕು. ಟೆಸ್ಲಾದ ಮಾರುಕಟ್ಟೆ ಮೌಲ್ಯ 2 ಟ್ರಿಲಿಯನ್ ಡಾಲರ್‌ (₹177 ಲಕ್ಷ ಕೋಟಿ) ತಲುಪಿದಾಗ ಮೊದಲ ಕಂತು ಲಭ್ಯವಾಗಲಿದೆ. ಪ್ರಸ್ತುತ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 1.5 ಟ್ರಿಲಿಯನ್‌ ಡಾಲರ್ (₹133 ಲಕ್ಷ ಕೋಟಿ) ಇದೆ. ಇದು 8.5 ಟ್ರಿಲಿಯನ್ ಡಾಲರ್‌ಗೆ (₹753 ಲಕ್ಷ ಕೋಟಿ) ಹೆಚ್ಚಳವಾಗಬೇಕಿದೆ. 2 ಕೋಟಿ ಟೆಸ್ಲಾ ವಾಹನಗಳ ಮಾರಾಟ ಮಾಡುವುದು ಸಹ ಈ ಗುರಿಗಳಲ್ಲಿ ಒಂದಾಗಿದೆ. ಈ ಗುರಿಗಳನ್ನು ತಲುಪಿದರೆ ಒಂದು ಟ್ರಿಲಿಯನ್ ಡಾಲರ್‌ ಪಡೆಯಲು ಅರ್ಹರಾಗಿರುತ್ತಾರೆ.

‘ನನ್ನನ್ನು ಬೆಂಬಲಿಸಿದ ಎಲ್ಲ ಷೇರುದಾರರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ’ ಎಂದು ಮಸ್ಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.