
ತುರ್ತು ನಿಧಿ
-ಎ.ಐ ಚಿತ್ರ
ಜೀವನದಲ್ಲಿ ಹಣಕಾಸಿನ ಅನಿಶ್ಚಿತತೆಗಳು ಯಾವಾಗ ಬೇಕಾದರೂ ಎದುರಾಗಬಹುದು. ಉದ್ಯೋಗ ನಷ್ಟ, ತರ್ತು ಆಸ್ಪತ್ರೆ ವೆಚ್ಚಗಳು ಅಥವಾ ತುರ್ತು ಪ್ರಯಾಣದ ಅಗತ್ಯ – ಇವುಗಳೆಲ್ಲವೂ ತಕ್ಷಣಕ್ಕೆ ಹಣ ಹೊಂದಿಸಬೇಕಾಗುವ ಪರಿಸ್ಥಿತಿಗಳನ್ನು ಉಂಟುಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಅಧಿಕ ಬಡ್ಡಿಸಾಲದ ಮೊರೆ ಹೋಗದೆ, ದೀರ್ಘಕಾಲದ ಉಳಿತಾಯವನ್ನು ಮುರಿಯದೆ ಈ ರೀತಿಯ ಸಮಸ್ಯೆಗಳನ್ನು ಎದುರಿಸಲು ಮದ್ಯಮ ವರ್ಗದ ಜನರಿಗೆ ತುರ್ತು ನಿಧಿ ಅತ್ಯಂತ ಅಗತ್ಯವಾಗಿದೆ.
ತುರ್ತು ನಿಧಿ ಎಂದರೆ ಅಚಾನಕ್ ಉಂಟಾಗುವ, ಅತ್ಯಾವಶ್ಯಕ ವೆಚ್ಚಗಳಿಗೆ ಮಾತ್ರ ಬಳಸಲು ನೀವು ಗಳಿಸಿ, ಖರ್ಚು ಮಾಡದೇ ಮೀಸಲಿಡುವ ಹಣ. ಇದು ನಿಮ್ಮ ಹಣಕಾಸಿನ ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತದೆ. ಮತ್ತು ಎಂತಹ ಪರಿಸ್ಥಿತಿಯಲ್ಲೂ ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.
ತುರ್ತು ನಿಧಿಯನ್ನು ಸಾಮಾನ್ಯ ಉಳಿತಾಯ ಖಾತೆ ಅಥವಾ ಲಿಕ್ವಿಡ್ ರೂಪದಲ್ಲಿರುವ ಹೂಡಿಕೆಗಳಲ್ಲಿ ಇರಿಸುವುದು ಉತ್ತಮ. ಏಕೆಂದರೆ ಅಗತ್ಯ ಬಂದಾಗ ನಿಮಗೆ ತಕ್ಷಣ ಹಣ ಲಭ್ಯವಾಗಬೇಕು. ಈ ಹಣವನ್ನು ತುರ್ತು ಪರಿಸ್ಥಿತಿಯಲ್ಲದ, ಹಬ್ಬಕ್ಕೆ ಅನಗತ್ಯ ಖರೀದಿ ಮತ್ತಿತರ ಐಷಾರಾಮಿ ಖರೀದಿಗಳು, ಅನಗತ್ಯ ಪ್ರವಾಸ, ಅಥವಾ ಪ್ರಯೋಜನಕ್ಕೆ ಬಾರದ ಖರ್ಚುಗಳಿಗೆ ಬಳಸಬಾರದು. ಈ ರೀತಿಯ ಹಣಕಾಸು ಶಿಸ್ತು ಬಹಳ ಮುಖ್ಯ. ಏಕೆಂದರೆ, ತುರ್ತು ನಿಧಿಯ ಉದ್ದೇಶವೇ ಸಂಕಷ್ಟದ ಸಮಯದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡುವುದು. ತುರ್ತು ನಿಧಿಹೊಂದಿಲ್ಲದ ಹೆಚ್ಚಿನವರು, ಕ್ರೆಡಿಟ್ ಕಾರ್ಡ್, ವೈಯಕ್ತಿಕ ಸಾಲ ಅಥವಾ ಸ್ಥಿರ ಬ್ಯಾಂಕ್ ಡಿಪಾಸಿಟ್ ಹಿಂಪಡೆಯುವ ಮಾರ್ಗಗಳನ್ನು ಅನುಸರಿಸುತ್ತಾರೆ. ಇದರಿಂದ ಹೆಚ್ಚುವರಿ ಬಡ್ಡಿ, ದೀರ್ಘಕಾಲದ ಹಣಕಾಸಿನ ನಷ್ಟ ಮತ್ತು ಸಾಲದ ಮರುಪಾವತಿಯ ಒತ್ತಡ ಉಂಟಾಗುತ್ತದೆ. ಆದರೆ ತುರ್ತು ನಿಧಿ ಇದ್ದರೆ, ಇಂತಹ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಬಹುದು. ಇದು ಕುಟುಂಬದ ಜೀವನಶೈಲಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ ಮತ್ತು ಭವಿಷ್ಯದ ಹೂಡಿಕೆ ಗುರಿಗಳನ್ನು ಕಾಪಾಡುತ್ತದೆ.
ತುರ್ತು ನಿಧಿಯ ಮೊತ್ತ ನಿಮ್ಮ ವಯಕ್ತಿಕ ಆದಾಯ ಮತ್ತು ಕುಟುಂಬದ ಮಾಸಿಕ ಖರ್ಚಿಗೆ ಸಂಬಂಧಿಸಿರುತ್ತದೆ. ಸಾಮಾನ್ಯವಾಗಿ ತುರ್ತು ನಿಧಿಯಲ್ಲಿ ಕನಿಷ್ಠ ಆರು ತಿಂಗಳಿಂದ ಹನ್ನೆರಡು ತಿಂಗಳ ಅವಶ್ಯಕ ವೆಚ್ಚಗಳಿಗೆ ಸಮಾನವಾದ ಮೊತ್ತವನ್ನು ಕೂಡಿಡಬೇಕು. ಈ ರೀತಿಯ ಕೂಡಿಟ್ಟ ವೆಚ್ಚಗಳು, ನಿಮ್ಮ ಮನೆ ಬಾಡಿಗೆ ಅಥವಾ ಗೃಹ ನಿರ್ಮಾಣಕ್ಕೆ ಪಡೆದ ಸಾಲದ ಮರುಪಾವತಿ, ವಿದ್ಯುತ್ ಮತ್ತು ನೀರಿನ ಬಿಲ್, ದಿನಸಿ ಖರ್ಚು, ಪ್ರಯಾಣ ವೆಚ್ಚ, ಆರೋಗ್ಯ ಮತ್ತು ಜೀವ ವಿಮೆ ಪ್ರೀಮಿಯಂ, ಮಕ್ಕಳ ಶಾಲಾ ಶುಲ್ಕ, ಮೊಬೈಲ್ ಮತ್ತು ಇಂಟರ್ನೆಟ್ ಬಿಲ್ ಹಾಗೂ ನಿಯಮಿತ ಔಷಧಿ ವೆಚ್ಚಗಳು ಸೇರಿರಬೇಕು.
ಉದಾಹರಣೆಗೆ, ನಿಮ್ಮ ವಯಕ್ತಿಕ ಮಾಸಿಕ ಅವಶ್ಯಕ ವೆಚ್ಚ ₹30,000 ಆಗಿದ್ದರೆ, ಆರು ತಿಂಗಳ ತುರ್ತು ನಿಧಿ ₹1,80,000 ಆಗುತ್ತದೆ. ಹಾಗೇ ಹನ್ನೆರಡು ತಿಂಗಳ ನಿಧಿ ₹3,60,000 ಆಗುತ್ತದೆ. ಸ್ಥಿರ ಆದಾಯವಿರುವ, ಹೆಚ್ಚು ಅವಲಂಬಿತರಿಲ್ಲದ ವ್ಯಕ್ತಿಗೆ ಕಡಿಮೆ ನಿಧಿ ಮೊತ್ತ ಸಾಕಾಗಬಹುದು. ಆದರೆ ದೈನಂದಿನ ಕೆಲಸಗಾರರು, ಸೇವೆಗೆ ಸಂಬಂದಿಸಿದ ಪ್ರೊಫೆಷನಲ್‌ಗಳು, ಸರಕು ಮತ್ತು ಸೇವೆ ವ್ಯಾಪಾರಿಗಳು ಅಥವಾ ಕೂಡು ಕುಟುಂಬದ ಜವಾಬ್ದಾರಿ ನಿಭಾಯಿಸುವ ವ್ಯಕ್ತಿಗಳಿಗೆ ಹೆಚ್ಚಿನ ತುರ್ತುನಿಧಿಯ ಶೇಖರಣೆ ಅಗತ್ಯವಾಗುತ್ತದೆ.
ಪ್ರತಿಯೊಬ್ಬರ ಹಣಕಾಸಿನ ಅಗತ್ಯ ವಿಭಿನ್ನವಾಗಿರುವುದರಿಂದ, ತುರ್ತು ನಿಧಿಯ ಪ್ರಮಾಣವೂ ವಯಕ್ತಿಕವಾಗಿರಬೇಕು. ಆದಾಯದ ಸ್ಥಿರತೆ, ಕುಟುಂಬದ ಅವಲಂಬಿತರು, ಆರೋಗ್ಯ ಪರಿಸ್ಥಿತಿ, ವಿಮಾ ರಕ್ಷಣೆಯ ಮಟ್ಟ ಮತ್ತು ನಿಮ್ಮ ಜೀವನಶೈಲಿ – ಇವೆಲ್ಲವೂ ನಿಧಿಯ ಮೊತ್ತವನ್ನು ನಿರ್ಧರಿಸುತ್ತವೆ. ಉದಾಹರಣೆಗೆ, ನಿಯಮಿತ ವೈದ್ಯಕೀಯ ವೆಚ್ಚ ಇರುವ ಕುಟುಂಬವು ಹೆಚ್ಚುವರಿ ಹಣವನ್ನು ತುರ್ತು ನಿಧಿಯಲ್ಲಿ ಕಾಯ್ದಿರಿಸಬೇಕು. ಆರೋಗ್ಯ ವಿಮೆ ಇದ್ದರೂ ಕೂಡ, ಕ್ಲೇಮ್ ಮಾಡಿಕೊಳ್ಳುವಾಗ ತಡವಾಗಬಹುದು, ಅಥವಾ ಸಂಪೂರ್ಣ ರಿಸ್ಕ್ ಕವರ್ ಇಲ್ಲದ ವೆಚ್ಚಗಳಿಗೆ ತಕ್ಷಣ ಹಣ ಬೇಕಾಗಬಹುದು.
ಇಂದಿನ ಡಿಜಿಟಲ್ ಯುಗದಲ್ಲಿ ಭಾರತದಲ್ಲಿನ ಹಣಕಾಸು ತುರ್ತು ನಿಧಿಯ ಸರಿಯಾದ ಮೊತ್ತವನ್ನು ನಿರ್ಧರಿಸಲು ಕೆಲವು ಫೈನಾನ್ಸಿಯಲ್ ಕ್ಯಾಲ್ಕುಲೇಟರ್ ಬಹಳ ಸಹಾಯಕವಾಗಿವೆ. ಇವು ನಿಮ್ಮ ಆದಾಯ, ಖರ್ಚು, ಕುಟುಂಬದ ಗಾತ್ರ ಮತ್ತು ಜೀವನಶೈಲಿಯನ್ನು ಆಧರಿಸಿ ನಿಖರವಾದ ತುರ್ತು ನಿಧಿಯ ಅಂದಾಜು ನೀಡುತ್ತವೆ. ಚಾರ್ಟ್‌ಗಳು ಮತ್ತು ಗ್ರಾಫ್‌ಗಳ ಮೂಲಕ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಇದರಿಂದ ತಪ್ಪು ಲೆಕ್ಕಾಚಾರಗಳನ್ನು ಹೋಗಲಾಡಿಸಬಹದು ಮತ್ತು ಬಹಳಷ್ಟು ಸಮಯವೂ ಉಳಿಯುತ್ತದೆ.
ತುರ್ತು ನಿಧಿ ನಿರ್ಮಾಣವು ಕೇವಲ ಒಂದು ದಿನದ ಅಥವಾ ತಿಂಗಳ ಕೆಲಸವಾಗಿರಬಾರದು, ಇದು ಕ್ರಮೇಣ ಮುಂದುವರಿಸಿಕೊಂಡು ಹೋಗುವ ಪ್ರಕ್ರಿಯೆಯಾಗಿರಬೇಕು. ಮೊದಲು ನಿಮ್ಮ ತುರ್ತು ನಿಧಿಯ ಸರಿಯಾದ ಮೊತ್ತವನ್ನು ನಿಗದಿಪಡಿಸಿಕೊಳ್ಳಬೇಕು, ನಂತರ ಅದಕ್ಕಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯುವುದು ಉತ್ತಮ.ಇದನ್ನು ಬೇರೆ ವಹಿವಾಟಿಗೆ ಬಳಸಬಾರದು. ಪ್ರತೀ ತಿಂಗಳು ನಿಗದಿತ ಅಲ್ಪ ಮೊತ್ತದಿಂದಲೇ ಪ್ರಾರಂಭಿಸಬಹುದು. ಉದಾಹರಣೆಗೆ, ₹1,000 ನಿಯಮಿತವಾಗಿ ಉಳಿಸಿದರೂ, ಕೆಲವು ವರ್ಷಗಳಲ್ಲಿ ಉತ್ತಮ ಮೊತ್ತ ಸಂಗ್ರಹವಾಗುತ್ತದೆ. ಬ್ಯಾಂಕ್ ನಲ್ಲಿ ಆಟೋ-ಡೆಬಿಟ್ ವ್ಯವಸ್ಥೆ ಬಳಸುವುದರಿಂದ ಉಳಿತಾಯ ಸುಲಭವಾಗುತ್ತದೆ ಮತ್ತು ಉಳಿತಾಯ ಖಾತೆಗಿಂತ ಹೆಚ್ಚು ಬಡ್ಡಿ ಗಳಿಸಬಹುದು. ಆದಾಯದಲ್ಲಿ ಏರುಪೇರಾದಾಗ, ಯಾವುದಾದರು ಹೊಸ ಜವಾಬ್ದಾರಿ ವಹಿಸಕೊಂಡರೆ, ಆರು ತಿಂಗಳಿಗೊಮ್ಮೆ ನಿಮ್ಮ ತುರ್ತು ನಿಧಿಯನ್ನು ಮರುಪರಿಶೀಲಿಸುವುದು ಅಗತ್ಯ.
ಸದ್ಯದಲ್ಲಿ ಯಾವುದೇ ತುರ್ತು ಅಗತ್ಯವಿಲ್ಲವೆಂದು ನಿಧಿಯಲ್ಲಿರುವ ಮೊತ್ತವನ್ನು ಅನಗತ್ಯ ಖರ್ಚಿಗೆ ಬಳಸುವುದು, ಸರಿಯಾಗಿ ವೆಚ್ಚಗಳನ್ನು ಗಮನಿಸದೇ ಕಡಿಮೆ ಮೊತ್ತವನ್ನು ಉಳಿಸುವುದು, ಹಣವನ್ನು ತಕ್ಷಣ ಲಭ್ಯವಾಗದ ಹೂಡಿಕೆಗಳಲ್ಲಿ ಇಡುವುದು, ಹಾಗೂ ಕೆಲವೊಮ್ಮೆ ಬಳಿಸಿದ ನಂತರ ಮತ್ತೆ ಅಷ್ಟೇ ಮೊತ್ತವನ್ನು ತುಂಬಿಸದೇ ಬಿಡುವುದು–ಇವೆಲ್ಲವೂ ಭವಿಷ್ಯದ ಸಂಕಷ್ಟಗಳಿಗೆ ಕಾರಣವಾಗಬಹುದು.
ತುರ್ತು ನಿಧಿಯನ್ನು ಅನಿರೀಕ್ಷಿತ ಆಸ್ಪತ್ರೆ ವೆಚ್ಚ, ಊಹಿಸದೇ ಆಗುವ ಉದ್ಯೋಗ ನಷ್ಟ, ಮನೆ ಅಥವಾ ವಾಹನದ ತುರ್ತು ದುರಸ್ತಿ, ಕುಟುಂಬದವರ ತುರ್ತು ಪ್ರಯಾಣ ಅಥವಾ ಕಾನೂನು ಸಂಬಂಧಿತ ಸಮಸ್ಯೆಗಳಂತಹ ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಜೀವನಶೈಲಿ ಸುಧಾರಣೆ, ಕೊಳ್ಳುಬಾಕತನ ಅಥವಾ ಮೋಜು-ಮಸ್ತಿಯ ಪ್ರವಾಸಗಳಿಗೆ ಇದನ್ನು ಬಳಸುವುದು ನಿಧಿಯ ಉದ್ದೇಶಕ್ಕೆ ವಿರುದ್ಧವಾಗಿದೆ.
ತುರ್ತು ನಿಧಿ ನಿಮ್ಮ ವಯಕ್ತಿಕ ಹಣಕಾಸಿನ ಬೆನ್ನೆಲುಬಾಗಿರಬೇಕು. ಇದು ನಿಮ್ಮನ್ನು ಅನಿರೀಕ್ಷಿತ ಸಂಕಷ್ಟಗಳಿಂದ ರಕ್ಷಿಸುತ್ತದೆ ಮತ್ತು ಭವಿಷ್ಯದ ಗುರಿಗಳನ್ನು ಸುರಕ್ಷಿತವಾಗಿರಿಸುವುದಲ್ಲದೇ ಕರಾರುವಕ್ಕಾಗಿ ಮುನ್ನಡೆಸುತ್ತದೆ. ಎಷ್ಟು ಹಣ ಉಳಿಸಬೇಕು ಎಂಬುದನ್ನು ಸರಿಯಾಗಿ ತಿಳಿದು, ನಿಯಮಿತವಾಗಿ ಉಳಿತಾಯ ಮಾಡಿದರೆ, ಯಾವ ಸಂಕಷ್ಟವೂ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಲು ಸಾಧ್ಯವಿಲ್ಲ. ಮಾನ್ಯತೆ ಹೊಂದಿದ ಹಣಕಾಸು ಸಂಸ್ಥೆಗಳ ಉಳಿತಾಯ ಮತ್ತು ವಿಮಾ ಯೋಜನೆಗಳು ನಿಮ್ಮ ತುರ್ತು ಸಿದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.