ನವದೆಹಲಿ: ಉದ್ಯೋಗಿ ಪಿಂಚಣಿ ಯೋಜನೆ (ಇಪಿಎಸ್) 1995ರ ಅಡಿ ಗರಿಷ್ಠ ಪಿಂಚಣಿ ಕೋರಿ ಉದ್ಯೋಗಿಗಳು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತ ಸಂಸ್ಥೆಗಳು ವೇತನದ ವಿವರ ಹಾಗೂ ಇತರೆ ದಾಖಲೆಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ಅವಧಿಯನ್ನು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಮುಂದಿನ ವರ್ಷದ ಜನವರಿ 31ರ ವರೆಗೆ ವಿಸ್ತರಿಸಿದೆ.
ಉದ್ಯೋಗಿ ಮತ್ತು ಉದ್ಯೋಗದಾತ ಸಂಸ್ಥೆಯ ಜಂಟಿ ಘೋಷಣೆ ಸಲ್ಲಿಕೆಗೆ ಇಪಿಎಫ್‌ಒ ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಿದೆ. ಇನ್ನೂ 3.1 ಲಕ್ಷ ಅರ್ಜಿಗಳ ಮೌಲ್ಯಮಾಪನ ಬಾಕಿ ಇದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.
2022ರ ನವೆಂಬರ್ 4ರಂದು ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) 2014ರ ಯೋಜನೆಯ (ಇಪಿಎಸ್) ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. 2023ರ ಫೆಬ್ರುವರಿ 26ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು.
ನೌಕರರ ಸಂಘಟನೆಗಳ ಮನವಿ ಮೇರೆಗೆ ಹಲವು ಬಾರಿ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಈಗ ಕೊನೆಯ ಬಾರಿ ಕಾಲಾವಕಾಶ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಸ್ತುತ ಪಿಂಚಣಿಯ ಮಾಸಿಕ ಗರಿಷ್ಠ ವೇತನವನ್ನು ₹15 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಈ ಮಿತಿಗಿಂತಲೂ ಹೆಚ್ಚಿನ ಪಿಂಚಣಿ ಕೋರಿ 17.49 ಲಕ್ಷ ಉದ್ಯೋಗಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದೆ.
ಸಲ್ಲಿಕೆಯಾಗಿರುವ ಜಂಟಿ ಹೇಳಿಕೆಯನ್ನು ಇಪಿಎಫ್‌ಒದಿಂದ ಮೌಲ್ಯಮಾಪನ ಮಾಡಲಾಗಿದೆ. ಈ ಪೈಕಿ 4.66 ಲಕ್ಷ ಅರ್ಜಿಗಳಿಗೆ ಹೆಚ್ಚುವರಿ ಮಾಹಿತಿ/ ಸ್ಪಷ್ಟನೆ ಕೋರಲಾಗಿದೆ. ಇದಕ್ಕೆ ಪ್ರತಿಕ್ರಿಯಿಸುವ ಅವಧಿಯನ್ನು ಮುಂದಿನ ವರ್ಷದ ಜನವರಿ 15ರ ವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.