ADVERTISEMENT

ಭವಿಷ್ಯ ನಿಧಿ ಬಡ್ಡಿ ದರ ಶೇ 8.5ಕ್ಕೆ ಕಡಿತ

‘ಇಪಿಎಫ್‌ಒ’ ಟ್ರಸ್ಟಿಗಳ ಕೇಂದ್ರೀಯ ಮಂಡಳಿ ನಿರ್ಧಾರ

ಪಿಟಿಐ
Published 5 ಮಾರ್ಚ್ 2020, 19:49 IST
Last Updated 5 ಮಾರ್ಚ್ 2020, 19:49 IST
ಪಿಎಫ್‌ ಲಾಂಛನ
ಪಿಎಫ್‌ ಲಾಂಛನ   

ನವದೆಹಲಿ: ಭವಿಷ್ಯ ನಿಧಿ (ಪಿಎಫ್‌) ಠೇವಣಿಗಳ ಮೇಲಿನ ಪ್ರಸಕ್ತ ಹಣಕಾಸು ವರ್ಷದ (2019–20) ಬಡ್ಡಿ ದರವನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಏಳು ವರ್ಷಗಳ ಹಿಂದಿನ ಕನಿಷ್ಠ ಮಟ್ಟವಾದ ಶೇ 8.5ಕ್ಕೆ ಇಳಿಸಿದೆ.

ಇದರಿಂದ ವೇತನದಾರರು ತಮ್ಮ ಭವಿಷ್ಯ ನಿಧಿ ಮೊತ್ತಕ್ಕೆ ಶೇ 0.15ರಷ್ಟು ಕಡಿಮೆ ಬಡ್ಡಿ ಆದಾಯ ಪಡೆಯಲಿದ್ದಾರೆ. ‘ಇಪಿಎಫ್‌ಒ’ದ ಹೂಡಿಕೆಗೆ ಕಡಿಮೆ ವರಮಾನ ಬಂದಿರುವುದರಿಂದ ಬಡ್ಡಿ ದರ ತಗ್ಗಿಸುವ ನಿರ್ಧಾರಕ್ಕೆ ಬರಲಾಗಿದೆ. ವಾರ್ಷಿಕ ಸಂಗ್ರಹವಾಗುವ ಮೊತ್ತದ ಶೇ 85ರಷ್ಟನ್ನು ಸಾಲದ ಮಾರುಕಟ್ಟೆಯಲ್ಲಿ ಮತ್ತು ಉಳಿದ ಶೇ 15ರಷ್ಟನ್ನು ಷೇರುಗಳಲ್ಲಿ ತೊಡಗಿಸಲಾಗುತ್ತದೆ. ಕುಂಠಿತ ಆರ್ಥಿಕ ಪ್ರಗತಿ ಕಾರಣಕ್ಕೆ ಸರ್ಕಾರದ ಸಾಲಪತ್ರ, ಸ್ಥಿರ ಠೇವಣಿ ಸೇರಿದಂತೆ ಸಾಲ ಮಾರುಕಟ್ಟೆಯಲ್ಲಿನ ಗಳಿಕೆ ಕಡಿಮೆಯಾಗಿದೆ.

ಈಗ ಘೋಷಿಸಿರುವ ಬಡ್ಡಿ ದರವು 2012–13 ರಿಂದೀಚೆಗಿನ ಅತ್ಯಂತ ಕಡಿಮೆ ಮಟ್ಟವಾಗಿದೆ. ಆ ವರ್ಷ ಶೇ 8.5ರಷ್ಟು ಬಡ್ಡಿ ನೀಡಲಾಗಿತ್ತು. 2018–19ನೇ ಹಣಕಾಸು ವರ್ಷಕ್ಕೆ ಶೇ 8.65ರಷ್ಟು ಬಡ್ಡಿ ದರ ನೀಡಲಾಗಿದೆ.

ADVERTISEMENT

ಕಾರ್ಮಿಕ ಸಚಿವಾಲಯವು ಈ ನಿರ್ಧಾರ ಜಾರಿಗೆ ತರಲು ಹಣಕಾಸು ಸಚಿವಾಲಯದ ಸಮ್ಮತಿ ಪಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.