ADVERTISEMENT

EPF ಠೇವಣಿ ಮೇಲಿನ ಬಡ್ಡಿ ದರ ಶೇ 8.25ರಲ್ಲೇ ಮುಂದುವರಿಸಲು ನಿರ್ಧಾರ: ವರದಿ

ಪಿಟಿಐ
Published 28 ಫೆಬ್ರುವರಿ 2025, 7:36 IST
Last Updated 28 ಫೆಬ್ರುವರಿ 2025, 7:36 IST
   

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) 2024–25ನೇ ಸಾಲಿಗೆ ನೌಕರರ ಭವಿಷ್ಯ ನಿಧಿ (ಇಪಿಎಫ್‌) ಠೇವಣಿಗಳಿಗೆ ಶೇ 8.25ರಷ್ಟು ಬಡ್ಡಿದರ ನಿಗದಿಪಡಿಸಿದೆ. 

ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್‌ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯು (ಸಿಬಿಟಿ) ಈ ಬಡ್ಡಿದರ ನಿಗದಿಪಡಿಸಿದೆ. ಪ್ರಸ್ತುತ ಇಪಿಎಫ್‌ಒದಲ್ಲಿ 7 ಕೋಟಿಗೂ ಹೆಚ್ಚು ಚಂದಾದಾರರು ಇದ್ದಾರೆ. 

2022–23ನೇ ಸಾಲಿನಡಿ ಶೇ 8.15ರಷ್ಟು ಬಡ್ಡಿದರ ನಿಗದಿಪಡಿ ಸಿದ್ದ ಸಂಘಟನೆಯು, 2023–24ನೇ ಸಾಲಿಗೆ ಶೇ 8.25ಕ್ಕೆ ಹೆಚ್ಚಿಸಿತ್ತು. ಸದ್ಯ ಇದನ್ನು ಪ್ರಸಕ್ತ ಆರ್ಥಿಕ ಸಾಲಿಗೂ ಮುಂದುವರಿಸಲು ಮಂಡಳಿಯು ಒಪ್ಪಿಗೆ ನೀಡಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.

ADVERTISEMENT

ಈ ಬಡ್ಡಿದರಕ್ಕೆ ಕೇಂದ್ರ ಹಣಕಾಸು ಸಚಿವಾಲಯವು ಅನುಮೋದನೆ ನೀಡಬೇಕಿದೆ. ಆ ನಂತರ ಸರ್ಕಾರವು ಅಧಿಕೃತವಾಗಿ ಗೆಜೆಟ್‌ನಲ್ಲಿ ಪ್ರಕಟಿಸಲಿದೆ. ಬಳಿಕ ಚಂದಾದಾರರ ಖಾತೆಗಳಿಗೆ ಬಡ್ಡಿದರಕ್ಕೆ ಅನುಗುಣವಾಗಿ ಮೊತ್ತ ಜಮೆಯಾಗಲಿದೆ ಎಂದು ಹೇಳಿದೆ.

ಇಡಿಎಲ್ಐ ಸೌಲಭ್ಯ: ಹಲವು ಮಾರ್ಪಾಡಿಗೆ ಸಿಬಿಟಿ ಅನುಮೋದನೆ

ಇಪಿಎಫ್ ಖಾತೆದಾರರಿಗೆ ನೀಡುವ ಉದ್ಯೋಗಿಯ ಠೇವಣಿ ಆಧರಿತ ವಿಮಾ (ಇಡಿಎಲ್‌ಐ) ಸೌಲಭ್ಯಕ್ಕೆ ಸಂಬಂಧಿಸಿದಂತೆ ಕೆಲವು ಮಾರ್ಪಾಡಿಗೆ ಮಂಡಳಿಯು ಒಪ್ಪಿಗೆ ನೀಡಿದೆ. ಉದ್ಯೋಗಿಯು ಮರಣ ಹೊಂದಿದರೆ ಆತನ ಕುಟುಂಬಕ್ಕೆ ಇಡಿಎಲ್ಐ ಅಡಿ ಆರ್ಥಿಕ ನೆರವು ದೊರೆಯಲಿದೆ.

ಇನ್ನು ಮುಂದೆ ಒಂದು ವರ್ಷ ಸೇವೆ ಸಲ್ಲಿಸಿ ಮೃತಪಟ್ಟ ಉದ್ಯೋಗಿಗಳ ಕುಟುಂಬಕ್ಕೂ ಆರ್ಥಿಕ ನೆರವು ಕಲ್ಪಿಸಲು ಮಂಡಳಿಯು ಅನುಮೋದನೆ ನೀಡಿದೆ.

ಅಂತಹ ಉದ್ಯೋಗಿಗಳ ಕುಟುಂಬಕ್ಕೆ ₹50 ಸಾವಿರ ವಿಮೆ ನೀಡಲಾಗುತ್ತದೆ. ಇದರಿಂದ ಪ್ರತಿವರ್ಷ 5 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಲಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. ಇಡಿಎಲ್‌ಐ ಅಡಿ ಸೌಲಭ್ಯ ಪಡೆಯಲು ಉದ್ಯೋಗಿಯು ಕಾರ್ಮಿಕರ ಭವಿಷ್ಯ ನಿಧಿಗೆ (ಇಪಿಎಫ್) ತನ್ನ ಪಾಲಿನ ಕೊಡುಗೆ ಪಾವತಿಸಿರಬೇಕಿದೆ. ಇನ್ನು ಮುಂದೆ ಇದಕ್ಕೆ ಕೊಡುಗೆ ನೀಡದಿದ್ದರೂ ವಿಮಾ ಸೌಲಭ್ಯ ನೀಡಲು ಮಂಡಳಿಯು ಅನುಮೋದನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.