ADVERTISEMENT

ಹೂಡಿಕೆದಾರರ ಸಂಪತ್ತು ₹16.38 ಲಕ್ಷ ಕೋಟಿ ವೃದ್ಧಿ

ಪಿಟಿಐ
Published 30 ಡಿಸೆಂಬರ್ 2022, 19:34 IST
Last Updated 30 ಡಿಸೆಂಬರ್ 2022, 19:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಮುಂಬೈ ಷೇರುಪೇಟೆಯ ವಹಿವಾಟು 2022ರಲ್ಲಿ ಉತ್ತಮವಾಗಿ ನಡೆದಿದ್ದು, ಇದರಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ಒಟ್ಟು ₹ 16.38 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ಷೇರುಪೇಟೆಯ ಒಟ್ಟು ಬಂಡವಾಳ ಮೌಲ್ಯ ₹ 282.38 ಲಕ್ಷ ಕೋಟಿಗೆ ಏರಿಕೆ ಆಗಿದೆ.

ಜಾಗತಿಕ ರಾಜಕೀಯ ಬಿಕ್ಕಟ್ಟು ಮತ್ತು ಹಣದುಬ್ಬರ ಪ್ರಮಾಣ ಏರಿಕೆ ಆಗುವ ಆತಂಕದ ನಡುವೆಯೂ ದೇಶಿ ಷೇರುಪೇಟೆಗಳು ಉತ್ತಮ ವಹಿವಾಟು ನಡೆಸಿದವು. ಇದರಿಂದಾಗಿ ಬಂಡವಾಳ ಮೌಲ್ಯ ಹೆಚ್ಚಾಯಿತು. ದೇಶದ ಮೌಲ್ಯಯುತ ಕಂಪನಿಗಳ ಸಾಲಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮೊದಲ ಸ್ಥಾನದಲ್ಲಿದ್ದು ಬಂಡವಾಳ ಮೌಲ್ಯವು ₹ 17.23 ಲಕ್ಷ ಕೋಟಿ ಇದೆ. ಟಿಸಿಎಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಡಿಸೆಂಬರ್‌ 5ರಂದು ಮಾರುಕಟ್ಟೆ ಬಂಡವಾಳ ಮೌಲ್ಯವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 290.46 ಲಕ್ಷ ಕೋಟಿಗೆ ತಲುಪಿತ್ತು. 2021ರಲ್ಲಿ ಸೆನ್ಸೆಕ್ಸ್‌ 10,502 ಅಂಶ ಏರಿಕೆ ಕಂಡಿತ್ತು. ಹೂಡಿಕೆದಾರರ ಸಂಪತ್ತು ಮೌಲ್ಯವು ಸುಮಾರು ₹ 78 ಲಕ್ಷ ಕೋಟಿಯಷ್ಟು ಹೆಚ್ಚಾಗಿತ್ತು.

ADVERTISEMENT

ಸೆನ್ಸೆಕ್ಸ್‌ ಇಳಿಕೆ: ಯುರೋಪ್‌ ಮಾರುಕಟ್ಟೆಗಳಲ್ಲಿ ನಡೆದ ಇಳಿಮುಖ ವಹಿವಾಟಿನಿಂದಾಗಿ ದೇಶದ ಷೇರುಪೇಟೆಗಳ ಸೂಚ್ಯಂಕಗಳು ಶುಕ್ರವಾರ ಇಳಿಕೆ ಕಾಣುವಂತಾಯಿತು. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 293 ಅಂಶ, ನಿಫ್ಟಿ 86 ಅಂಶ ಇಳಿಕೆ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.