ADVERTISEMENT

ಈಕ್ವಿಟಿ ಎಂ.ಎಫ್‌: ಹೂಡಿಕೆ ಇಳಿಕೆ

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅನಿಶ್ಚಿತತೆಯಿಂದ ತಗ್ಗಿದ ಒಳಹರಿವು: ಎಎಂಎಫ್‌ಐ

ಪಿಟಿಐ
Published 10 ಅಕ್ಟೋಬರ್ 2025, 13:12 IST
Last Updated 10 ಅಕ್ಟೋಬರ್ 2025, 13:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸೆಪ್ಟೆಂಬರ್‌ ತಿಂಗಳಿನಲ್ಲಿ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್‌ಗಳಲ್ಲಿ (ಎಂ.ಎಫ್‌) ಹೂಡಿಕೆ ಪ್ರಮಾಣ ಶೇ 9ರಷ್ಟು ಇಳಿಕೆಯಾಗಿದ್ದು, ₹30,421 ಕೋಟಿ ಹೂಡಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಶುಕ್ರವಾರ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅನಿಶ್ಚಿತತೆ ಮತ್ತು ಷೇರು ಮಾರುಕಟ್ಟೆಯ ಏರಿಳಿತದಿಂದಾಗಿ ಹೂಡಿಕೆದಾರರು ಎಚ್ಚರಿಕೆ ನಡೆ ಅನುಸರಿಸುತ್ತಿದ್ದಾರೆ. ಹೀಗಾಗಿ ಒಳಹರಿವು ಮಂದಗೊಂಡಿದೆ ಎಂದು ಹೇಳಿದೆ.

ಆಗಸ್ಟ್‌ ತಿಂಗಳಿನಲ್ಲಿ ಒಳಹರಿವು ₹33,430 ಕೋಟಿಯಷ್ಟಿದ್ದರೆ, ಜುಲೈನಲ್ಲಿ ₹42,702 ಕೋಟಿ ಒಳಹರಿವಾಗಿತ್ತು. ಸತತ ಎರಡನೇ ತಿಂಗಳು ಹೂಡಿಕೆ ಪ್ರಮಾಣ ಇಳಿಕೆಯಾಗಿದೆ ಎಂದು ತಿಳಿಸಿದೆ. 

ADVERTISEMENT

ಫ್ಲೆಕ್ಸಿ ಕ್ಯಾಪ್‌ ಫಂಡ್‌ಗಳಲ್ಲಿ ₹7,029 ಕೋಟಿ ಒಳಹರಿವಾಗಿದೆ. ಮಿಡ್‌ಕ್ಯಾಪ್ ₹5,085 ಕೋಟಿ, ಸ್ಮಾಲ್‌ಕ್ಯಾಪ್‌ಗಳಲ್ಲಿ ₹4,363 ಕೋಟಿ ಮತ್ತು ಲಾರ್ಜ್‌ ಕ್ಯಾಪ್‌ ಫಂಡ್‌ಗಳಲ್ಲಿ ₹2,319 ಕೋಟಿ ಹೂಡಿಕೆಯಾಗಿದೆ. 

ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ (ಎಸ್‌ಐಪಿ) ಸೆಪ್ಟೆಂಬರ್‌ನಲ್ಲಿ ₹29,361 ಕೋಟಿ ಹೂಡಿಕೆಯಾಗಿದೆ. ಆಗಸ್ಟ್‌ನಲ್ಲಿ ₹28,265 ಕೋಟಿ ಹೂಡಿಕೆಯಾಗಿತ್ತು.

ಚಿನ್ನದಲ್ಲಿ ಹೂಡಿಕೆ ಹೆಚ್ಚಳ

ಚಿನ್ನದ ಇಟಿಎಫ್‌ನಲ್ಲಿ ಆಗಸ್ಟ್‌ ತಿಂಗಳಿನಲ್ಲಿ ₹2,190 ಕೋಟಿ ಹೂಡಿಕೆ ಆಗಿತ್ತು. ಸೆಪ್ಟೆಂಬರ್‌ನಲ್ಲಿ ₹8,363 ಕೋಟಿಗೆ ಹೆಚ್ಚಳವಾಗಿದೆ. ಇದು ಈ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಹೂಡಿಕೆಯಾದ ತಿಂಗಳು ಇದಾಗಿದೆ.

ಜಾಗತಿಕ ಅನಿಶ್ಚಿತತೆಯಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದರಿಂದ ಒಳಹರಿವು ಏರಿಕೆಯಾಗಿದೆ. ಚಿನ್ನದ ಇಟಿಎಫ್‌ನ ಒಟ್ಟು ಸಂಪತ್ತಿನ ಗಾತ್ರ ₹90 ಸಾವಿರ ಕೋಟಿ ದಾಟಿದೆ ಎಂದು ತಿಳಿಸಿದೆ.

ಒಟ್ಟಾರೆ ಉದ್ಯಮದ ಸಂಪತ್ತಿನ ನಿರ್ವಹಣಾ ಮೌಲ್ಯ ಸೆಪ್ಟೆಂಬರ್‌ನಲ್ಲಿ ₹75.61 ಲಕ್ಷ ಕೋಟಿಯಷ್ಟಿದೆ. ಆಗಸ್ಟ್‌ನಲ್ಲಿ ₹75.12 ಲಕ್ಷ ಕೋಟಿಯಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.