ADVERTISEMENT

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ: ಬೆಲೆಯಲ್ಲಿ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 6:54 IST
Last Updated 14 ಮಾರ್ಚ್ 2020, 6:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಮತ್ತು ಸೆಸ್ ಅನ್ನು ಲೀಟರ್‌ಗೆ ತಲಾ ₹3 ಗಳನ್ನು ಏರಿಕೆ ಮಾಡಿದೆ.ಇದರಿಂದಾಗಿ ಗ್ರಾಹಕರಿಗೆ ಯಾವುದೇ ಹೊರೆಯಾಗದೆ ಸರ್ಕಾರಕ್ಕೆ ಮಾತ್ರ ₹ 39,000 ಕೋಟಿ ಲಾಭವಾಗಲಿದೆ.

ಬೆಲೆ ಏರಿಕೆ ಲಾಭವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳದೆ ಸಂಪೂರ್ಣ ಲಾಭವನ್ನು ತಾನೇ ಇಟ್ಟುಕೊಳ್ಳಲು ಅನುವು ಮಾಡಿಕೊಡುವ ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ (ಎಸ್‌ಎಇಡಿ) ಅಡಿಯಲ್ಲಿ ಹೆಚ್ಚಳ ಮಾಡಲಾಗಿದೆ.

ಈ ಮೂಲಕ ₹1 ರಸ್ತೆ ಸುಂಕ ಸೇರಿದಂತೆ ಪ್ರತಿ ಲೀಟರ್‌ ಪೆಟ್ರೋಲ್ ಮತ್ತು ಡೀಸೆಲ್‌ಗೆ ₹3 ಹೆಚ್ಚಳವಾಗಿದೆ.

ADVERTISEMENT

ಕಳೆದ ವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ ₹4,800 ರಿಂದ ₹2500 ಕ್ಕೆಇಳಿಕೆಯಾಗಿರುವುದರಿಂದಾಗಿ ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದೆ.ಅಬಕಾರಿ ಸುಂಕ ಹೆಚ್ಚಿಸಿರುವುದರಿಂದಾಗಿಕೇಂದ್ರಕ್ಕೆ ಹೆಚ್ಚುವರಿಯಾಗಿ ₹39,000 ಕೋಟಿ ಲಾಭವಾಗಲಿದೆ. ಆದರೆ ಗ್ರಾಹಕರಿಗೆ ಇಂಧನ ಮಾರಾಟದಲ್ಲಿ ಯಾವುದೇ ಬೆಲೆ ಏರಿಕೆಯಾಗುವುದಿಲ್ಲ.

ಕಳೆದ ಜುಲೈನಲ್ಲಿಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ತಲಾ ₹1 ಗೆ ಹೆಚ್ಚಿಸಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿಗೆ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿದೆ.

ಭಾರತವು ಅತಿಹೆಚ್ಚು ಇಂಧನ ಬಳಸುವ ರಾಷ್ಟ್ರವಾಗಿದ್ದು,ತೈಲ ಅಗತ್ಯತೆಯ ಶೇ 80 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಭಾರತವು ಅತಿ ಹೆಚ್ಚು ಬಳಕೆ ಮತ್ತು ಬೇಡಿಕೆ ಕೊರತೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಕಚ್ಚಾ ತೈಲದ ಬೆಲೆ ಕುಸಿತವು ಇಂಧನ ದರವನ್ನು ಕಡಿತಗೊಳಿಸುವ ಮೂಲಕ ಸರ್ಕಾರವು ಗ್ರಾಹಕರಿಗೆ ಲಾಭವನ್ನು ನೀಡುತ್ತದೆ ಎಂಬ ಭರವಸೆಯನ್ನು ಹುಟ್ಟುಹಾಕಿತ್ತು.

ತೆರಿಗೆ ಮತ್ತು ತೆರಿಗೆ ರಹಿತ ಆದಾಯದ ಕೊರತೆಯನ್ನು ನೀಗಿಸಲು ಅಬಕಾರಿ ಸುಂಕವನ್ನು ಹೆಚ್ಚಿಸಲು ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ.

ಇಂದಿನ (14 ಮಾರ್ಚ್ 2020) ಬೆಂಗಳೂರು ಪೆಟ್ರೋಲ್ ದರ: (ಹಿಂದುಸ್ತಾನ್ ಪೆಟ್ರೋಲಿಯಂ) ಪೆಟ್ರೋಲ್ ಲೀಟರ್‌ಗೆ ರೂ.72.24 (ನಿನ್ನೆಯ ದರ: 72.40) ಅಂದರೆ 14 ಪೈಸೆ ಇಳಿಕೆ ಡೀಸೆಲ್ ಲೀಟರ್‌ಗೆ ರೂ.64.70 (ನಿನ್ನೆಯ ದರ: 64.86) ಅಂದರೆ 16 ಪೈಸೆ ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.