ADVERTISEMENT

ತೀವ್ರ ಇಳಿಕೆ ಕಂಡ ರಫ್ತು ವಹಿವಾಟು: ಶೇಕಡ 16.65ರಷ್ಟು ಕುಸಿತ

ಪಿಟಿಐ
Published 15 ನವೆಂಬರ್ 2022, 15:45 IST
Last Updated 15 ನವೆಂಬರ್ 2022, 15:45 IST
Container Cargo ship in the ocean isolated on white background, Freight Transportation, Shipping, Nautical Vessel, Logistic Import Export background.
Container Cargo ship in the ocean isolated on white background, Freight Transportation, Shipping, Nautical Vessel, Logistic Import Export background.   

ನವದೆಹಲಿ: ದೇಶದ ರಫ್ತು ಚಟುವಟಿಕೆಗಳು ಎರಡು ವರ್ಷಗಳ ನಂತರದಲ್ಲಿ ನಕಾರಾತ್ಮಕ ಮಟ್ಟವನ್ನು ತಲುಪಿವೆ. ಅಕ್ಟೋಬರ್‌ನಲ್ಲಿ ರಫ್ತು ಪ್ರಮಾಣವು ಶೇಕಡ 16.65ರಷ್ಟು ಕುಸಿದಿದ್ದು, 29.78 ಬಿಲಿಯನ್‌ ಡಾಲರ್‌ಗೆ (₹ 2.40 ಲಕ್ಷ ಕೋಟಿ) ತಲುಪಿದೆ. ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆ ಆಗಿದ್ದು ಈ ಕುಸಿತಕ್ಕೆ ಪ್ರಮುಖ ಕಾರಣ.

ಅಕ್ಟೋಬರ್‌ನಲ್ಲಿ ದೇಶದ ವ್ಯಾಪಾರ ಕೊರತೆಯು 26.91 ಬಿಲಿಯನ್‌ ಡಾಲರ್‌ಗೆ (₹ 2.17 ಲಕ್ಷ ಕೋಟಿ) ಹಿಗ್ಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.

ಮುತ್ತು ಮತ್ತು ಆಭರಣ, ಎಂಜಿನಿಯರಿಂಗ್, ಪೆಟ್ರೋಲಿಯಂ ಉತ್ಪನ್ನಗಳು, ಸಿದ್ಧ ಉಡುಪುಗಳು ಮತ್ತು ಜವಳಿ, ರಾಸಾಯನಿಕಗಳು, ಔಷಧ, ಸಮುದ್ರ ಉತ್ಪನ್ನಗಳು, ಚರ್ಮ ರ‌ಫ್ತು ಅಕ್ಟೋಬರ್‌ನಲ್ಲಿ ಕುಸಿತ ಕಂಡಿದೆ.

ADVERTISEMENT

ಅಕ್ಟೋಬರ್‌ನಲ್ಲಿ ಆಮದು ಪ್ರಮಾಣವು ಶೇ 6ರಷ್ಟು ಹೆಚ್ಚಾಗಿ, 56.69 ಬಿಲಿಯನ್‌ ಡಾಲರ್‌ಗೆ (₹ 4.58 ಲಕ್ಷ ಕೋಟಿ) ತಲುಪಿದೆ. ಕಚ್ಚಾ ತೈಲ, ಹತ್ತಿ, ರಸಗೊಬ್ಬರ ಮತ್ತು ಯಂತ್ರಗಳ ಆಮದು ಹೆಚ್ಚಾಗಿದ್ದು ಇದಕ್ಕೆ ಕಾರಣ. ಏಪ್ರಿಲ್‌ನಿಂದ ಅಕ್ಟೋಬರ್‌ ಅಂತ್ಯದವರೆಗಿನ ಅವಧಿಯಲ್ಲಿ ರಫ್ತು ಪ್ರಮಾಣ ಶೇ 12.55ರಷ್ಟು, ಆಮದು ಪ್ರಮಾಣ ಶೇ 33.12ರಷ್ಟು ಹೆಚ್ಚಾಗಿದೆ.

ಹಿಂದೆ 2020ರ ನವೆಂಬರ್ ತಿಂಗಳಲ್ಲಿ ರಫ್ತು ಪ್ರಮಾಣವು ಶೇ 8.74ರಷ್ಟು ಕುಸಿತ ಕಂಡಿತ್ತು. ‘ಜಾಗತಿಕ ಮಟ್ಟದಲ್ಲಿನ ಸವಾಲುಗಳು ಬೇಡಿಕೆಯ ಮೇಲೆ ಪರಿಣಾಮ ಬೀರುತ್ತಿವೆ. ಅದು ಭಾರತದ ರಫ್ತು ವಹಿವಾಟನ್ನು ಕೂಡ ಪ್ರಭಾವಿಸುತ್ತದೆ’ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬಾರ್ತ್‌ವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.