ನವದೆಹಲಿ: ಜಾಗತಿಕ ಸವಾಲುಗಳ ನಡುವೆಯೂ ಜೂನ್ ತಿಂಗಳಲ್ಲಿ ₹2.94 ಲಕ್ಷ ಕೋಟಿ ಮೌಲ್ಯದ ಸರಕುಗಳು ದೇಶದಿಂದ ರಫ್ತಾಗಿವೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹2.86 ಲಕ್ಷ ಕೋಟಿ ಮೌಲ್ಯದ ಸರಕುಗಳ ರಫ್ತು ಆಗಿತ್ತು. ಇದಕ್ಕೆ ಹೋಲಿಸಿದರೆ ರಫ್ತಿನಲ್ಲಿ ಶೇ 2.56ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
ಕಚ್ಚಾ ತೈಲ, ಎಲೆಕ್ಟ್ರಾನಿಕ್ ಸರಕುಗಳ ಆಮದು ಹೆಚ್ಚಳದಿಂದ, ಆಮದು ಪ್ರಮಾಣವು ಶೇ 5ರಷ್ಟು ಏರಿಕೆಯಾಗಿದೆ. ಇದರ ಒಟ್ಟು ಮೌಲ್ಯ ₹4.47 ಲಕ್ಷ ಕೋಟಿಯಿಂದ ₹4.69 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಆಮದು ಮತ್ತು ರಫ್ತು ನಡುವಿನ ಅಂತರ (ವ್ಯಾಪಾರ ಕೊರತೆ) ₹1.75 ಲಕ್ಷ ಕೋಟಿಯಷ್ಟಿದೆ.
2024–25ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರಕು ಮತ್ತು ಸೇವೆಗಳ ರಫ್ತು ಮೌಲ್ಯ ₹16.72 ಲಕ್ಷ ಕೋಟಿಯಾಗಿದೆ. ಇದೇ ಪ್ರವೃತ್ತಿ ಮುಂದುವರಿದರೆ ಪ್ರಸಕ್ತ ಹಣಕಾಸು ವರ್ಷದ ಪೂರ್ಣಗೊಳ್ಳುವ ವೇಳೆಗೆ ಒಟ್ಟು ಸರಕು ಮತ್ತು ಸೇವೆಗಳ ರಫ್ತು ಮೌಲ್ಯ ₹66.88 ಲಕ್ಷ ಕೋಟಿ ದಾಟಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ಹೇಳಿದ್ದಾರೆ.
ಮೇ ತಿಂಗಳಲ್ಲಿ ದೇಶದ ಸರಕುಗಳ ರಫ್ತು ಶೇ 9.1ರಷ್ಟು ಏರಿಕೆಯಾಗಿದ್ದು, ಇದರ ಮೌಲ್ಯ ₹3.18 ಲಕ್ಷ ಕೋಟಿಯಷ್ಟಾಗಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ ರಫ್ತು ಮೌಲ್ಯ ₹9.19 ಲಕ್ಷ ಕೋಟಿಯಾಗಿದೆ. ಆಮದು ₹14.39 ಲಕ್ಷ ಕೋಟಿಯಾಗಿದ್ದು, ಶೇ 7.6ರಷ್ಟು ಹೆಚ್ಚಳ ಆಗಿದೆ ಎಂದು ತಿಳಿಸಿದೆ.
ಅಮೆರಿಕ, ಯುಎಇ, ಮಲೇಷ್ಯಾ, ಬಾಂಗ್ಲಾದೇಶ, ತಾಂಜೇನಿಯಾ, ನೆದರ್ಲೆಂಡ್ಸ್ ಮತ್ತು ಸಿಂಗಪುರಕ್ಕೆ ಜೂನ್‌ನಲ್ಲಿ ಹೆಚ್ಚಿನ ರಫ್ತಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.