ADVERTISEMENT

ಕುಸಿದ ಈರುಳ್ಳಿ ಸಗಟು ದರ: ಜನವರಿಯಿಂದ ಕಟಾವು ಆರಂಭ; ಮತ್ತಷ್ಟು ಬೆಲೆ ಇಳಿಕೆ?

ಜನವರಿಯಿಂದ ಕಟಾವು ಆರಂಭ: ಮತ್ತಷ್ಟು ಬೆಲೆ ಇಳಿಕೆ?

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 1:24 IST
Last Updated 29 ಡಿಸೆಂಬರ್ 2024, 1:24 IST
   

ಬೆಂಗಳೂರು: ಮಾರುಕಟ್ಟೆಯಲ್ಲಿ ಈರುಳ್ಳಿ ಆವಕ ಏರಿಕೆಯಾಗುತ್ತಿದ್ದು, ಸಗಟು ದರ ಇಳಿಕೆಯಾಗಿದೆ. ಇದರಿಂದ ಚಿಲ್ಲರೆ ದರವೂ ಇಳಿಕೆಯ ಹಾದಿ ಹಿಡಿದಿದೆ.

ಒಂದು ತಿಂಗಳ ಹಿಂದೆ ‘ಎ’ ಗ್ರೇಡ್‌ ಈರುಳ್ಳಿಯ ಸಗಟು ದರವು ಕ್ವಿಂಟಲ್‌ಗೆ ₹7,000ದಿಂದ ₹8,000 ಇತ್ತು. ಸದ್ಯ ₹3,500ರಿಂದ ₹4,000ಕ್ಕೆ ಇಳಿದಿದೆ. ‘ಬಿ’ ಗ್ರೇಡ್‌ ಈರುಳ್ಳಿ ಧಾರಣೆಯು ಕ್ವಿಂಟಲ್‌ಗೆ ₹3,000ದಿಂದ ₹3,400 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಪ್ರತಿ ಕೆ.ಜಿ ಈರುಳ್ಳಿಯು ₹30ರಿಂದ ₹45ಕ್ಕೆ
ಮಾರಾಟವಾಗುತ್ತಿದೆ.   

ಸೆಪ್ಟೆಂಬರ್‌ನಲ್ಲಿ ದೇಶದಾದ್ಯಂತ ಈರುಳ್ಳಿ ದರವು ಏರಿಕೆಯ ಪಥ ಹಿಡಿದಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರವು ದೆಹಲಿ ಮತ್ತು ಮುಂಬೈನಲ್ಲಿ ಕೆ.ಜಿಗೆ ₹35ರ ರಿಯಾಯಿತಿ ದರದಡಿ ಈರುಳ್ಳಿ ಮಾರಾಟಕ್ಕೆ ಚಾಲನೆ ನೀಡಿತ್ತು.

ADVERTISEMENT

ಕೇಂದ್ರವು ಈರುಳ್ಳಿ ಮೇಲೆಶೇ 20ರಷ್ಟು ಕನಿಷ್ಠ ರಫ್ತು ದರ ವಿಧಿಸಿದೆ. ಇದರಿಂದ ವಿದೇಶಗಳಿಗೆ ಈರುಳ್ಳಿ ರವಾನೆ ಕಡಿಮೆಯಾಗಿದೆ.  

ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕನಿಷ್ಠ ರಫ್ತು ದರವನ್ನು ಹಿಂಪಡೆಯುವಂತೆ ಬೆಳೆಗಾರರಿಂದ ಒತ್ತಾಯ ಕೇಳಿಬಂದಿತ್ತು. ಆದರೆ, ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸುವ ದೃಷ್ಟಿಯಿಂದ ಕೇಂದ್ರವು ಇದನ್ನು ವಾಪಸ್‌ ಪಡೆಯಲಿಲ್ಲ. ಇದು ಬೆಲೆ ಇಳಿಕೆಗೆ ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. 

ಸದ್ಯ ಮಹಾರಾಷ್ಟ್ರದ ಸೊಲ್ಲಾ‍ಪುರ ಸೇರಿ ರಾಜ್ಯದ ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆದಿರುವ ಈರುಳ್ಳಿಯು ಇಲ್ಲಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಶನಿವಾರ 51,175 ಚೀಲ (ಪ್ರತಿ ಚೀಲ 50 ಕೆ.ಜಿ) ಆವಕವಾಗಿತ್ತು.

ಮುಂಗಾರಿನಲ್ಲಿ ತಡವಾಗಿ ಬಿತ್ತನೆ ಮಾಡಿರುವ ಹಾಗೂ ಹಿಂಗಾರಿನಲ್ಲಿ ಬಿತ್ತನೆ ಆಗಿರುವ ಈರುಳ್ಳಿಯ ಕಟಾವು ಜನವರಿ ಎರಡನೇ ವಾರದಿಂದ ಆರಂಭವಾಗಲಿದೆ. ಹಿರಿಯೂರು, ಚಿತ್ರದುರ್ಗ, ಕೂಡ್ಲಿಗಿ,
ಹಗರಿಬೊಮ್ಮನಹಳ್ಳಿ, ಜಗಳೂರು, ಕೊಟ್ಟೂರು ಭಾಗದಲ್ಲಿ ಬೆಳೆದಿರುವ ಈರುಳ್ಳಿಯ ಕಟಾವು ಇದೇ ವೇಳೆಗೆ ಶುರುವಾಗಲಿದೆ.

‘ಮಹಾರಾಷ್ಟ್ರದ ಸತಾರಾ, ನಾಸಿಕ್‌, ಪುಣೆ, ಜಲಗಾಂವ್‌ ಭಾಗದಲ್ಲಿ ಬಿತ್ತನೆಯಾಗಿರುವ ಈರುಳ್ಳಿ ಕಟಾವು ಫೆಬ್ರುವರಿಯಿಂದ ಶುರುವಾಗಲಿದೆ. ಆಗ ಮಾರುಕಟ್ಟೆಗೆ ಹೊಸ ಸರಕಿನ ಆವಕ ಹೆಚ್ಚಲಿದೆ. ಕೇಂದ್ರ ಸರ್ಕಾರವು ಕನಿಷ್ಠ ರಫ್ತು ದರವನ್ನು ವಾ‍ಪಸ್‌ ಪಡೆದರಷ್ಟೇ ದರ ಏರಿಕೆಯಾಗಲಿದೆ. ಇಲ್ಲವಾದರೆ ಮತ್ತಷ್ಟು ಇಳಿಕೆಯಾಗಬಹುದು’ ಎಂದು ಈರುಳ್ಳಿ ಸಗಟು ವ್ಯಾ‍ಪಾರಿ ಲೋಕೇಶ್‌ ಜಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.