ಸಾಂಕೇತಿಕ ಚಿತ್ರ
ಹಾಸನ: ಸಂಕ್ರಾಂತಿ ಹಬ್ಬದಿಂದಾಗಿ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ನಿರೀಕ್ಷಿತ ಇಳುವರಿ ಇಲ್ಲದೆ ಇರುವುದರಿಂದ ತೆಂಗಿನಕಾಯಿ ಹಾಗೂ ಕೊಬ್ಬರಿ ಬೆಲೆಯಲ್ಲಿ ಏರಿಕೆಯಾಗಿದೆ.
ಒಂದು ವರ್ಷದಿಂದ ಕ್ವಿಂಟಲ್‌ಗೆ ₹8ಸಾವಿರದಿಂದ ₹8,500 ಇದ್ದ ಕೊಬ್ಬರಿ ಬೆಲೆ ಈಗ ₹14,660ರಿಂದ ₹15 ಸಾವಿರಕ್ಕೆ ಮುಟ್ಟಿದೆ. ಕೊಬ್ಬರಿ ಕೆ.ಜಿ.ಗೆ ₹240 ಏರಿಕೆಯಾಗಿದ್ದರೆ, ದೊಡ್ಡಗಾತ್ರದ ತೆಂಗಿನಕಾಯಿಯೊಂದಕ್ಕೆ ₹40 ರಿಂದ ₹45 ದರವಿದೆ. ಒಂದು ಎಳನೀರು ದರ ₹50 ದಾಟಿದೆ.
ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು, ಹಾಸನ ತಾಲ್ಲೂಕಿನ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. 2023-24ರಲ್ಲಿ ಮಳೆ ಕೊರತೆಯಿಂದಾಗಿ ಇಳುವರಿ ಕಡಿಮೆಯಾಗಿದೆ.
‘ಕಾಯಿ ಕೀಳಿಸುವ, ಸುಲಿಸುವ ಜಂಜಡವೇ ಬೇಡ ಎಂದು ಬೆಳೆಗಾರರು ಎಳನೀರು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಕ್ಕಂತೆ ತೆಂಗಿನಕಾಯಿ ಹಾಗೂ ಕೊಬ್ಬರಿ ಸಿಗುತ್ತಿಲ್ಲ’ ಎನ್ನುತ್ತಾರೆ ವರ್ತಕರು.
ಅರಸೀಕೆರೆಯ ಮಾರುಕಟ್ಟೆಯಿಂದ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ಬಿಹಾರ, ಉತ್ತರಾಂಚಲ ಮತ್ತು ಮಹಾರಾಷ್ಟ್ರಕ್ಕೆ ಕೊಬ್ಬರಿ ರವಾನೆಯಾಗುತ್ತದೆ. ಈ ಕೊಬ್ಬರಿಯನ್ನು ಪ್ರಮುಖವಾಗಿ ಸಿಹಿತಿಂಡಿ ಮತ್ತು ಅಡುಗೆಗೆ ಬಳಸುತ್ತಾರೆ. ಉಂಡೆ ಕೊಬ್ಬರಿ ಬೆಲೆಯ ಏರಿಳಿತವು ಉತ್ತರ ಭಾರತದಲ್ಲಿ ನಡೆಯುವ ಹಬ್ಬ, ಮದುವೆ ಋತು ಮತ್ತು ಹವಾಗುಣದ ಮೇಲೆ ಅವಲಂಬಿತವಾಗಿದೆ.
ಬೇಸಿಗೆ ಆರಂಭವಾಗುತ್ತಿದೆ. ಇದರಿಂದ ಮುಂಬೈ ಮಾರುಕಟ್ಟೆಯಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲಿ ಎಳನೀರು ಒಂದಕ್ಕೆ ₹100 ಇದೆ. ಜಿಲ್ಲೆಯಿಂದ ವಾರಕ್ಕೆ 20ರಿಂದ 25 ಲೋಡ್ ಎಳನೀರು ರವಾನೆ ಮಾಡಲಾಗುತ್ತಿದೆ.
ಈ ಬಾರಿ ತಮಿಳುನಾಡು ಕೇರಳದಲ್ಲಿಯೂ ಕೊಬ್ಬರಿ ಉತ್ಪಾದನೆ ಕಡಿಮೆಯಾಗಿದ್ದು ಉತ್ತರ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಉತ್ತಮ ಬೆಲೆ ಬಂದಿದೆಮಂಗಳಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ
ಹಬ್ಬಗಳಿರುವುದರಿಂದ ಸದ್ಯಕ್ಕೆ ಬೆಲೆ ಹೆಚ್ಚಳವಾಗಿದೆ. ಸಂಕ್ರಾಂತಿಯ ನಂತರ ಹೆಚ್ಚಿನ ಕೊಬ್ಬರಿ ದಾಸ್ತಾನು ಬಂದರ ಬೆಲೆ ಕಡಿಮೆಯಾಗಬಹುದುಸಿದ್ದಲಿಂಗಸ್ವಾಮಿ ಅರಸೀಕೆರೆ ಎಪಿಎಂಸಿ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.