
ನವದೆಹಲಿ: ಅಕ್ಟೋಬರ್ ತಿಂಗಳಿನಲ್ಲಿ 36.5 ಲಕ್ಷ ಟನ್ ಪೆಟ್ರೋಲ್ ದೇಶದಲ್ಲಿ ಮಾರಾಟವಾಗಿದೆ. ಈ ಮಾರಾಟವು ಐದು ತಿಂಗಳ ಗರಿಷ್ಠ ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.
ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಈ ಅಕ್ಟೋಬರ್‌ನಲ್ಲಿನ ಪೆಟ್ರೋಲ್ ಮಾರಾಟದಲ್ಲಿ ಶೇ 7ರಷ್ಟು ಹೆಚ್ಚಳವಾಗಿದೆ. ಆದರೆ, ಡೀಸೆಲ್ ಮಾರಾಟ ಇಳಿಕೆಯಾಗಿದೆ ಎಂದು ಸರ್ಕಾರದ ಅಂಕಿ–ಅಂಶಗಳು ಹೇಳಿವೆ.
ಹಬ್ಬಗಳ ಕಾರಣದಿಂದಾಗಿ ಜನರ ಪ್ರಯಾಣ ಹೆಚ್ಚಳವಾಯಿತು. ಇದು ಪೆಟ್ರೋಲ್ ಮಾರಾಟ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 34 ಲಕ್ಷ ಟನ್ ಪೆಟ್ರೋಲ್ ಮಾರಾಟವಾಗಿತ್ತು.
ಅಕ್ಟೋಬರ್‌ನಲ್ಲಿ 76 ಲಕ್ಷ ಟನ್ ಡೀಸೆಲ್ ಮಾರಾಟವಾಗಿದೆ. ಕಳೆದ ಅಕ್ಟೋಬರ್‌ನಲ್ಲಿ 76.4 ಲಕ್ಷ ಟನ್ ಮಾರಾಟವಾಗಿತ್ತು. ಸಾಮಾನ್ಯವಾಗಿ ಮಳೆ ಶುರುವಾದ ನಂತರ ಡೀಸೆಲ್ ಬಳಕೆ ಕಡಿಮೆ ಆಗುತ್ತದೆ. ನೀರಾವರಿ ಪಂಪ್‌ಸೆಟ್‌ಗಳ ಬಳಕೆಯಲ್ಲಿ ಇಳಿಕೆ ಮತ್ತು ವಾಣಿಜ್ಯ ವಾಹನಗಳ ಸಂಚಾರ ಮಂದಗೊಳ್ಳುವುದರಿಂದ ಹೀಗಾಗುತ್ತದೆ. ದೇಶದ ಒಟ್ಟು ಇಂಧನದ ಬಳಕೆಯಲ್ಲಿ ಡೀಸೆಲ್ ಬಳಕೆ ಪ್ರಮಾಣ ಶೇ 40ರಷ್ಟಿದೆ.
ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್) ಬಳಕೆ ಶೇ 1.6ರಷ್ಟು ಹೆಚ್ಚಳವಾಗಿ, 7.69 ಲಕ್ಷ ಟನ್ ಆಗಿದೆ. ಎಲ್‌ಪಿಜಿ ಮಾರಾಟವು ಶೇ 5.4ರಷ್ಟು ಏರಿಕೆಯಾಗಿ, 30 ಲಕ್ಷ ಟನ್‌ನಷ್ಟಾಗಿದೆ. ಮನೆಗಳಲ್ಲಿ ಬಳಸುವ ಅಡುಗೆ ಅನಿಲ ಸಿಲಿಂಡರ್ ಬಳಕೆ ಹೆಚ್ಚಾಗಿರುವುದೇ ಎಲ್‌ಪಿಜಿ ಮಾರಾಟ ಏರಿಕೆಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.