ADVERTISEMENT

ಕೇಂದ್ರಕ್ಕೆ ಆರ್‌ಬಿಐ ಮಧ್ಯಂತರ ಲಾಭಾಂಶ

ಗ್ರಾಹಕರಿಗೆ ಬಡ್ಡಿದರ ಕಡಿತದ ಲಾಭ ವರ್ಗಾವಣೆ ವಿಷಯ ಗುರುವಾರ ಚರ್ಚೆ: ದಾಸ್‌

ಪಿಟಿಐ
Published 18 ಫೆಬ್ರುವರಿ 2019, 20:15 IST
Last Updated 18 ಫೆಬ್ರುವರಿ 2019, 20:15 IST
ಆರ್‌ಬಿಐ ನಿರ್ದೇಶಕ ಮಂಡಳಿ ಸಭೆಯಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ ಭಾಗವಹಿಸಿದ್ದರು  –ಪಿಟಿಐ ಚಿತ್ರ
ಆರ್‌ಬಿಐ ನಿರ್ದೇಶಕ ಮಂಡಳಿ ಸಭೆಯಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ ಭಾಗವಹಿಸಿದ್ದರು  –ಪಿಟಿಐ ಚಿತ್ರ   

ಮುಂಬೈ: ಕೇಂದ್ರ ಸರ್ಕಾರಕ್ಕೆ ₹ 28 ಸಾವಿರ ಕೋಟಿ ಮಧ್ಯಂತರ ಲಾಭಾಂಶ ನೀಡಲಾಗುವುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

ಕೇಂದ್ರೀಯ ಬ್ಯಾಂಕ್‌ನ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2018ರ ಡಿಸೆಂಬರ್‌ ಅಂತ್ಯಕ್ಕೆ ಕೊನೆಗೊಂಡ ಅರ್ಧ ವಾರ್ಷಿಕ ಅವಧಿಗೆ ಈ ಮಧ್ಯಂತರ ಲಾಭಾಂಶ ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸತತ ಎರಡನೆ ವರ್ಷವೂ ಆರ್‌ಬಿಐ ಕೇಂದ್ರ ಸರ್ಕಾರಕ್ಕೆ ಮಧ್ಯಂತರ ಲಾಭಾಂಶ ಪಾವತಿಸುತ್ತಿದೆ.

ಸಾರ್ವತ್ರಿಕ ಚುನಾವಣೆ ಮುನ್ನ ಜಾರಿಗೊಳಿಸುತ್ತಿರುವ ಹಲವಾರು ಜನಪ್ರಿಯ ಕಾರ್ಯಕ್ರಮಗಳಿಗಾಗಿ ಕೇಂದ್ರ ಸರ್ಕಾರಕ್ಕೆ ತುರ್ತಾಗಿ ಎದುರಾಗಿರುವ ಹಣಕಾಸಿನ ಬಿಕ್ಕಟ್ಟು ಇದರಿಂದ ದೂರವಾಗಲಿದೆ.

ADVERTISEMENT

ಮಾರ್ಚ್‌ ಅಂತ್ಯಕ್ಕೆ ಕೊನೆಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷದ ಬಜೆಟ್‌ ಕೊರತೆಯನ್ನು ಕೆಲಮಟ್ಟಿಗೆ ಭರ್ತಿ ಮಾಡಿಕೊಳ್ಳಲೂ ಇದರಿಂದ ಸಾಧ್ಯವಾಗಲಿದೆ. ತೆರಿಗೆ ಸಂಗ್ರಹ ಮತ್ತು ಷೇರು ವಿಕ್ರಯವು ಬಜೆಟ್‌ನಲ್ಲಿ ಅಂದಾಜಿಸಿರುವಂತೆ ಇಲ್ಲದಿರುವುದರಿಂದ ಸರ್ಕಾರಕ್ಕೆ ಹಣದ ಕೊರತೆ ಎದುರಾಗಿದೆ.

ಸರ್ಕಾರದ ಅಂದಾಜು: ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್‌ಬಿಐ ಮತ್ತು ಸರ್ಕಾರಿ ಸ್ವಾಮ್ಯದ ಇತರ ಬ್ಯಾಂಕ್‌ಗಳಿಂದ ಲಾಭಾಂಶ ರೂಪದಲ್ಲಿ ₹ 74,140 ಕೋಟಿ ಸಂಗ್ರಹವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ. 2019–20ರ ಹಣಕಾಸು ವರ್ಷದಲ್ಲಿ ಈ ಮೊತ್ತವನ್ನು ₹ 82,910 ಕೋಟಿಗೆ ನಿಗದಿಪಡಿಸಲಾಗಿದೆ.

ಆರ್‌ಬಿಐ ಬಳಿ ₹ 3.6 ಲಕ್ಷ ಕೋಟಿ ಹೆಚ್ಚುವರಿ ಹಣ ಇದೆ. ಅದರಲ್ಲಿನ ಕೆಲ ಭಾಗವನ್ನು ತನಗೆ ವರ್ಗಾಯಿಸಬೇಕು ಎನ್ನುವುದು ಕೇಂದ್ರ ಸರ್ಕಾರದ ನಿಲುವಾಗಿದೆ.

ಬಡ್ಡಿದರ ಕಡಿತ ವರ್ಗಾವಣೆ ಚರ್ಚೆ: ಅಲ್ಪಾವಧಿ ಬಡ್ಡಿದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಕುರಿತು ಚರ್ಚಿಸಲು ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಗುರುವಾರ ಸಭೆ ನಡೆಸಲಾಗುವುದು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ.

ಆರ್‌ಬಿಐಬ್ಯಾಂಕ್‌ಗಳಿಗೆ ನೀಡುವ ಸಾಲದ ಬಡ್ಡಿದರವನ್ನು (ರೆಪೊ) ಶೇ 0.25ರಷ್ಟು ತಗ್ಗಿಸಿದೆ. ಆದರೆ, ಎಸ್‌ಬಿಐ ಮತ್ತು ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಮಾತ್ರವೇ ಇದರ ಲಾಭವನ್ನು ಗ್ರಾಹಕರಿಗೆ ಅಲ್ಪ ಪ್ರಮಾಣದಲ್ಲಿ ವರ್ಗಾಯಿಸಿವೆ. ಹೀಗಾಗಿ ಸಭೆ ನಡೆಸಲು ನಿರ್ಧರಿಸಲಾಗಿದೆ.

‘ದೊಡ್ಡ ಬ್ಯಾಂಕ್‌ಗಳು ಅಗತ್ಯ’
ನವದೆಹಲಿ (ಪಿಟಿಐ):
‘ದೇಶಿ ಬ್ಯಾಂಕಿಂಗ್‌ ಕ್ಷೇತ್ರವನ್ನು ಪ್ರಗತಿಯ ಉತ್ತುಂಗಕ್ಕೆ ಕೊಂಡೊಯ್ಯಲುಕಡಿಮೆ ಸಂಖ್ಯೆಯ ದೊಡ್ಡ ಬ್ಯಾಂಕ್‌ಗಳ ಅಗತ್ಯ ಇದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಇಲ್ಲಿ ನಡೆದ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು,‘ಎಸ್‌ಬಿಐನೊಂದಿಗೆ ಸಹವರ್ತಿ ಬ್ಯಾಂಕ್‌ಗಳ ವಿಲೀನದ ಅನುಭವದ ಬಳಿಕ ಎರಡನೇ ದೊಡ್ಡ ವಿಲೀನ ಪ್ರಕ್ರಿಯೆ ನಡೆಯುತ್ತಿದೆ. ಬ್ಯಾಂಕಿಂಗ್‌ ವಹಿವಾಟನ್ನು ಹೆಚ್ಚು ಲಾಭದಾಯಕವಾಗಿ ಪರಿವರ್ತಿಸಲು ಸಹ ಇಂತಹ ವಿಲೀನ ನೆರವಾಗಲಿದೆ’ಎಂದಿದ್ದಾರೆ.

2017ರಲ್ಲಿ ಎಸ್‌ಬಿಐನೊಂದಿಗೆ ಐದು ಸಹವರ್ತಿ ಬ್ಯಾಂಕ್‌ಗಳು ಮತ್ತು ಮಹಿಳಾ ಬ್ಯಾಂಕ್‌ ವಿಲೀನಗೊಳಿಸಲಾಗಿತ್ತು. ಆ ಬಳಿಕ ಇದೀಗ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಲೀನಗೊಳಿಸಲು ಸರ್ಕಾರ ಒಪ್ಪಿಗೆ ನೀಡಿದೆ.

ವಿಲೀನದ ಬಳಿಕ ಸೃಷ್ಟಿಯಾಗಲಿರುವ ಮೂರನೇ ಅತಿದೊಡ್ಡ ಬ್ಯಾಂಕ್‌ ಇದೇ ಏಪ್ರಿಲ್‌ 1 ರಿಂದ ಕಾರ್ಯಾಚರಣೆ ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.