ADVERTISEMENT

ಪಿಎಫ್‌ : ಶೇ 8.65 ಬಡ್ಡಿ ದರಕ್ಕೆಹಣಕಾಸು ಸಚಿವಾಲಯ ಸಮ್ಮತಿ

ಪಿಟಿಐ
Published 26 ಏಪ್ರಿಲ್ 2019, 20:00 IST
Last Updated 26 ಏಪ್ರಿಲ್ 2019, 20:00 IST
ಇಪಿಎಫ್‌ಒ
ಇಪಿಎಫ್‌ಒ   

ನವದೆಹಲಿ: 2018–19ನೆ ಹಣಕಾಸು ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿಯ (ಪಿಎಫ್‌) ಶೇ 8.65ರಷ್ಟು ಬಡ್ಡಿ ದರಕ್ಕೆ ಕೇಂದ್ರ ಹಣಕಾಸು ಸಚಿವಾಲಯವು ತನ್ನ ಅನುಮೋದನೆ ನೀಡಿದೆ.

ಪಿಂಚಣಿ ನಿಧಿ ನಿರ್ವಹಣಾ ಸಂಸ್ಥೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ನಿಗದಿ ಮಾಡಿದ್ದ ಈ ಬಡ್ಡಿ ದರದಿಂದ ಔಪಚಾರಿಕ ವಲಯದ 6 ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ಪ್ರಯೋಜನ ದೊರೆಯಲಿದೆ.

ಹಣಕಾಸು ಸಚಿವಾಲಯದ ಈ ಅನುಮೋದನೆಗೆ ಪೂರಕವಾಗಿ, ಆದಾಯ ತೆರಿಗೆ ಇಲಾಖೆ ಮತ್ತು ಕಾರ್ಮಿಕ ಸಚಿವಾಲಯವು ಬಡ್ಡಿ ದರ ಸಂಬಂಧ ಅಧಿಸೂಚನೆ ಹೊರಡಿಸಲಿವೆ. ಇದಾದ ನಂತರ, ಭವಿಷ್ಯ ನಿಧಿ ಸಂಘಟನೆಯ ಸದಸ್ಯರ ಖಾತೆಗೆ ಬಡ್ಡಿ ದರ ಸೇರ್ಪಡೆ ಮಾಡಲು ‘ಇಪಿಎಫ್‌ಒ’ ತನ್ನ 120ಕ್ಕೂ ಹೆಚ್ಚು ಕ್ಷೇತ್ರ ಅಧಿಕಾರಿಗಳಿಗೆ ನಿರ್ದೇಶನ ನೀಡಲಿದೆ. ಹೊಸ ಬಡ್ಡಿ ದರಕ್ಕೆ ಅನುಗುಣವಾಗಿ ಸದಸ್ಯರ ಭವಿಷ್ಯ ನಿಧಿ ಹಣ ಇತ್ಯರ್ಥಗೊಳ್ಳಲಿದೆ.

ADVERTISEMENT

ಶೇ 8.65ರಂತೆ ಬಡ್ಡಿ ಪಾವತಿಸಿದ ನಂತರ ‘ಇಪಿಎಫ್‌ಒ’ನಲ್ಲಿ ₹ 151.67 ಕೋಟಿ ಉಳಿಯಲಿದೆ. ಒಂದು ವೇಳೆ ಶೇ 8.7ರಷ್ಟು ಬಡ್ಡಿ ದರ ನಿಗದಿ ಮಾಡಿದ್ದರೆ ₹ 158 ಕೋಟಿಗಳ ಕೊರತೆ ಬೀಳುತ್ತಿತ್ತು. ಈ ಕಾರಣಕ್ಕೆ ಶೇ 8.65ರ ಬಡ್ಡಿ ದರ ನಿಗದಿ ಮಾಡಲಾಗಿದೆ.

ಶೇ 8.65ರಷ್ಟು ಬಡ್ಡಿ ದರಕ್ಕೆ ಹಣಕಾಸು ಸಚಿವಾಲಯದಲ್ಲಿನ ಹಣಕಾಸು ಸೇವೆಗಳ ಇಲಾಖೆಯು (ಡಿಎಫ್‌ಎಸ್‌) ತನ್ನ ಸಮ್ಮತಿ ನೀಡಿದೆ. ಪಿಂಚಣಿ ನಿಧಿಯ ದಕ್ಷ ನಿರ್ವಹಣೆಗೆ ಸಂಬಂಧಿಸಿದಂತೆ ಕೆಲ ನಿಬಂಧನೆಗಳನ್ನು ಪಾಲಿಸುವ ಷರತ್ತಿಗೆ ಒಳಪಟ್ಟು ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

‘ಇಪಿಎಫ್‌ಒ’ದ ನೀತಿ ನಿರ್ಧಾರ ಕೈಗೊಳ್ಳುವ ಸರ್ವೋಚ್ಚ ಮಂಡಳಿಯಾಗಿರುವ ಕೇಂದ್ರದ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಅಧ್ಯಕ್ಷತೆಯಲ್ಲಿನ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯು ಫೆಬ್ರುವರಿ ತಿಂಗಳಲ್ಲಿ ಬಡ್ಡಿ ದರ ಹೆಚ್ಚಿಸುವ ನಿರ್ಧಾರ ಕೈಗೊಂಡಿತ್ತು.

ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಬಡ್ಡಿ ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. 2017–18ರಲ್ಲಿದ್ದ ಶೇ 8.55 ಬಡ್ಡಿ ದರವನ್ನು ಶೇ 0.10ರಷ್ಟು ಹೆಚ್ಚಿಸಿ ಶೇ 8.65ಕ್ಕೆ ಏರಿಕೆ ಮಾಡಲಾಗಿತ್ತು.

ಇದಕ್ಕೂ ಮೊದಲು ಭವಿಷ್ಯ ನಿಧಿ ಸಂಘಟನೆಯು, 2015–16ರಲ್ಲಿದ್ದ ಶೇ 8.8ರಷ್ಟು ಬಡ್ಡಿ ದರವನ್ನು 2016–17ರಲ್ಲಿ ಶೇ 8.65ಕ್ಕೆ ಇಳಿಸಿತ್ತು. 2017–18ರಲ್ಲಿನ ಶೇ 8.55ರಷ್ಟು ಬಡ್ಡಿ ದರವು ಐದು ವರ್ಷಗಳಲ್ಲಿನ ಕನಿಷ್ಠ ಮಟ್ಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.