ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಯಡಿ (ಎನ್‌ಪಿಎಸ್) ಇರುವ ಕೇಂದ್ರ ಸರ್ಕಾರಿ ನೌಕರರಿಗೆ ಮೂಲ ವೇತನದ ಶೇ 50ರಷ್ಟನ್ನು ಪಿಂಚಣಿ ನೀಡುವ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್), ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆ ಪ್ರಕಟಿಸಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಕೇಂದ್ರ ಸಚಿವ ಸಂಪುಟವು ಈ ಹೊಸ ಯೋಜನೆಯ ಜಾರಿಗೆ ಅನುಮೋದನೆ ನೀಡಿತ್ತು. ಏಪ್ರಿಲ್ 1ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.
2004ರ ಜನವರಿ 1ರಿಂದ ಕೆಲಸಕ್ಕೆ ಸೇರಿದ ಕೇಂದ್ರ ಸರ್ಕಾರಿ ನೌಕರರಿಗೆ ಎನ್‌ಪಿಎಸ್ ಜಾರಿಯಲ್ಲಿದೆ. ಇದರಡಿ ಒಟ್ಟು 23 ಲಕ್ಷ ನೌಕರರು ಇದ್ದಾರೆ. ಈ ನೌಕರರು ಯುಪಿಎಸ್ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಹಾಲಿ ಇರುವ ಎನ್‌ಪಿಎಸ್‌ನಲ್ಲಿಯೇ ಮುಂದುವರಿಬಹುದಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಉದ್ಯೋಗಿಯು ಸೇವೆಯಿಂದ ವಜಾಗೊಂಡರೆ ಯೋಜನೆಯಡಿ ಸೌಲಭ್ಯ ಲಭಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಕನಿಷ್ಠ 25 ವರ್ಷದವರೆಗೆ ಸೇವೆ ಸಲ್ಲಿಸಿದವರಿಗೆ ನಿವೃತ್ತಿ ಹಿಂದಿನ 12 ತಿಂಗಳ ಸರಾಸರಿ ಮೂಲ ವೇತನದ ಕನಿಷ್ಠ ಶೇ 50ರಷ್ಟು ಪಿಂಚಣಿ ಸಿಗಲಿದೆ. ಕನಿಷ್ಠ ಹತ್ತು ವರ್ಷ ಸೇವೆ ಸಲ್ಲಿಸಿದ ಬಳಿಕ ನಿವೃತ್ತಿ ಹೊಂದುವ ನೌಕರರಿಗೆ ಮಾಸಿಕ ₹10 ಸಾವಿರ ಪಿಂಚಣಿ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.