ADVERTISEMENT

ಸರ್ಕಾರಿ ವಿಮಾ ಕಂಪನಿಗಳ ವಿಲೀನ: ಹಣಕಾಸು ಸಚಿವಾಲಯದಿಂದ ಪ್ರಸ್ತಾವ ಮರುಪರಿಶೀಲನೆ

ಪಿಟಿಐ
Published 23 ನವೆಂಬರ್ 2025, 14:19 IST
Last Updated 23 ನವೆಂಬರ್ 2025, 14:19 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ಮೂರು ವಿಮಾ ಕಂಪನಿಗಳನ್ನು ವಿಲೀನಗೊಳಿಸಿ, ಒಂದೇ ಕಂಪನಿನ್ನಾಗಿ ಮಾಡುವ ಪ್ರಸ್ತಾವವನ್ನು ಮರು ಪ‍ರಿಶೀಲಿಸಲು ಕೇಂದ್ರ ಹಣಕಾಸು ಸಚಿವಾಲಯವು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಓರಿಯಂಟಲ್‌ ಇನ್ಶೂರೆನ್ಸ್, ನ್ಯಾಷನಲ್ ಇನ್ಶೂರೆನ್ಸ್ ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್‌ ಈ ಮೂರು ಕಂಪನಿಗಳು. ಈ ಕಂಪನಿಗಳನ್ನು ಆರ್ಥಿಕ ಸಂಕಷ್ಟದಿಂದ ಹೊರತರಲು 2019–20ರಿಂದ 2021–22ರವರೆಗೆ ಕೇಂದ್ರ ಸರ್ಕಾರವು ₹17,450 ಕೋಟಿ ನೀಡಿದೆ.

2018–19ರ ಬಜೆಟ್‌ನಲ್ಲಿ ಅಂದಿನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಮೂರು ಕಂಪನಿಗಳನ್ನು ವಿಲೀನಗೊಳಿಸಿ, ಒಂದೇ ವಿಮಾ ಕಂಪನಿಯಾಗಿ ಮಾಡುವುದಾಗಿ ಹೇಳಿದ್ದರು.‌

ADVERTISEMENT

ಆದರೆ, 2020ರ ಜುಲೈನಲ್ಲಿ ಕೇಂದ್ರ ಸರ್ಕಾರ ಈ ವಿಲೀನ ಆಲೋಚನೆ ಕೈಬಿಟ್ಟು, ಈ ಮೂರು ಕಂಪನಿಗಳಿಗೆ ₹12,450 ಕೋಟಿ ನೀಡಲು ಒಪ‍್ಪಿಗೆ ನೀಡಿತ್ತು.

ಈ ಆರ್ಥಿಕ ನೆರವಿನಿಂದ ಕಂಪನಿಗಳ ಆರ್ಥಿಕ ಸ್ಥಿತಿ ಸುಧಾರಣೆಗೊಂಡಿಎ. ಈಗ ಅವುಗಳ ದಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವಾಲಯವು ವಿಲೀನ ಕುರಿತು ಪ್ರಾಥಮಿಕ ಮೌಲ್ಯಮಾಪನ ನಡೆಸುತ್ತಿದೆ ಎಂದು ಗೊತ್ತಾಗಿದೆ.

ಜೊತೆಗೆ, ಒಂದು ವಿಮಾ ಕಂಪನಿಯನ್ನು ಖಾಸಗೀಕರಣ ಮಾಡುವ ಬಗ್ಗೆಯೂ ಕೇಂದ್ರವು ಆಲೋಚಿಸುತ್ತಿದೆ. ಆದರೆ ಯಾವುದೂ ತೀರ್ಮಾನ ಆಗಿಲ್ಲ ಎಂದು ಗೊತ್ತಾಗಿದೆ.

2021-22ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಎರಡು ಸರ್ಕಾರಿ ಬ್ಯಾಂಕ್‌ ಮತ್ತು ಒಂದು ವಿಮಾ ಕಂಪನಿಯನ್ನು ಖಾಸಗೀಕರಣ ಮಾಡುವುದಾಗಿ ಹೇಳಿದ್ದರು. 

ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳ ಖಾಸಗೀಕರಣಕ್ಕೆ ಒಪ್ಪಿಗೆ ನೀಡುವ ವಿಮಾ ವ್ಯವಹಾರ (ರಾಷ್ಟ್ರೀಕರಣ) ತಿದ್ದುಪಡಿ ಕಾಯ್ದೆ– 2021ಕ್ಕೆ ಅದೇ ವರ್ಷದ ಆಗಸ್ಟ್‌ನಲ್ಲಿ ಸಂಸತ್ತು ಅಂಗೀಕಾರ ನೀಡಿತ್ತು.

ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳ ಶೇ 51ಕ್ಕಿಂತ ಹೆಚ್ಚಿನ ಪಾಲು ಸರ್ಕಾರದ ಬಳಿಯೇ ಇರಬೇಕು ಎಂಬ ನಿಯಮ ಈವರೆಗೆ ಇತ್ತು. ಈ ತಿದ್ದುಪಡಿಯಿಂದ ಶೇ 51ರಷ್ಟು ಪಾಲನ್ನು ಸರ್ಕಾರ ಹೊಂದಿರಬೇಕು ಎಂಬ ನಿಬಂಧನೆ ತೆರವುಗೊಂಡಿದೆ. ಈ ತಿದ್ದುಪಡಿಯು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳ ಖಾಸಗೀಕರಣಕ್ಕೆ ಅನುಮತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.