ADVERTISEMENT

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿಲೀನ ಶೀಘ್ರ: ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 15:32 IST
Last Updated 6 ಏಪ್ರಿಲ್ 2025, 15:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು ಶೀಘ್ರವೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ವಿಲೀನ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆಯಿದೆ. ಇದರಿಂದ ದೇಶದಲ್ಲಿ ಹಾಲಿ ಇರುವ 43 ಆರ್‌ಆರ್‌ಬಿಗಳ ಸಂಖ್ಯೆಯು 28ಕ್ಕೆ ಇಳಿಯಲಿದೆ.

‘ಒಂದು ರಾಜ್ಯ; ಒಂದು ಆರ್‌ಆರ್‌ಬಿ’ ತತ್ವಕ್ಕೆ ಕೇಂದ್ರ ಮುಂದಾಗಿದೆ. ಈ ಬ್ಯಾಂಕ್‌ಗಳ ಪರಿಣಾಮಕಾರಿ ಕಾರ್ಯಾಚರಣೆ ಮತ್ತು ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ವಿಲೀನಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಲೀನಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದೆ. ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ 15 ಬ್ಯಾಂಕ್‌ಗಳು ವಿಲೀನಗೊಳ್ಳಲಿವೆ ಎಂದು ಹೇಳಿವೆ.

ADVERTISEMENT

ಆಂಧ್ರಪ್ರದೇಶದಲ್ಲಿ ನಾಲ್ಕು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿವೆ. ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 3, ಬಿಹಾರ, ಗುಜರಾತ್‌, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದಲ್ಲಿ ತಲಾ ಎರಡು ಬ್ಯಾಂಕ್‌ ಕಾರ್ಯ ನಿರ್ವಹಿಸುತ್ತಿವೆ.

ಆಂಧ್ರಪ್ರದೇಶದ ಗ್ರಾಮೀಣ ವಿಕಾಸ ಬ್ಯಾಂಕ್‌ (ಎಪಿಜಿವಿಬಿ) ಮತ್ತು ತೆಲಂಗಾಣದ ಗ್ರಾಮೀಣ ಬ್ಯಾಂಕ್‌ನ ಆಸ್ತಿ ಮತ್ತು ಹೊಣೆಗಾರಿಕೆ ಹಂಚಿಕೆಗೆ ಸಂಬಂಧಿಸಿದಂತೆ ಸಚಿವಾಲಯವು ನಿರ್ಣಯವನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

Highlights - ಅಂಕಿ–ಅಂಶ 43: ದೇಶದಲ್ಲಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ 22,069: ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿರುವ ಈ ಬ್ಯಾಂಕ್‌ಗಳ ಶಾಖೆ ಸಂಖ್ಯೆ  ಶೇ 6.1: 2024ರ ಮಾರ್ಚ್ ಅಂತ್ಯಕ್ಕೆ ಬ್ಯಾಂಕ್‌ಗಳ ವಸೂಲಾಗದ ಸಾಲದ ಸರಾಸರಿ ಪ್ರಮಾಣ 

Cut-off box - ಕಾರ್ಯ ನಿರ್ವಹಣೆ ಹೇಗೆ? ಗ್ರಾಮೀಣ ಪ್ರದೇಶದ ಸಣ್ಣ ರೈತರು ಕೃಷಿ ಕಾರ್ಮಿಕರು ಮತ್ತು ಕುಶಲಕರ್ಮಿಗಳಿಗೆ ಸಾಲ ಸೇರಿ ಇತರೆ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸುವುದು ಇವುಗಳ ಜವಾಬ್ದಾರಿಯಾಗಿದೆ. ಪ್ರಸ್ತುತ ಈ ಬ್ಯಾಂಕ್‌ಗಳಲ್ಲಿ ಕೇಂದ್ರ ಶೇ 50 ಪ್ರಾಯೋಜಕ ಬ್ಯಾಂಕ್‌ಗಳು ಶೇ 35 ಮತ್ತು ರಾಜ್ಯ ಸರ್ಕಾರಗಳು ಶೇ 15ರಷ್ಟು ಷೇರು ಪಾಲು ಹೊಂದಿವೆ. 2021–22ರಲ್ಲಿ ಕೇಂದ್ರವು ಈ ಬ್ಯಾಂಕ್‌ಗಳ ಬಲವರ್ಧನೆಗೆ ಮುಂದಾಗಿತ್ತು. ಇದಕ್ಕೆ ಪೂರಕವಾಗಿ ಎರಡು ವರ್ಷದವರೆಗೆ ಅವುಗಳ ಬಂಡವಾಳ ವೃದ್ಧಿಗೆ ₹5445 ಕೋಟಿ ನೆರವು ಕಲ್ಪಿಸಿತ್ತು. ಇದರಿಂದ 2023–24ರಲ್ಲಿ ಬ್ಯಾಂಕ್‌ಗಳ ಬಂಡವಾಳ ಹೆಚ್ಚಳವಾಗಿತ್ತು. ಈ ಅವಧಿಯಲ್ಲಿ ಬ್ಯಾಂಕ್‌ಗಳು ₹7571 ಕೋಟಿ ನಿವ್ವಳ ಲಾಭ ಗಳಿಸಿದ್ದು ಚಾರಿತ್ರಿಕ ದಾಖಲೆಯಾಗಿತ್ತು. ಬ್ಯಾಂಕ್‌ಗಳು ಅನಿರೀಕ್ಷಿತ ನಷ್ಟಕ್ಕೆ ತುತ್ತಾದಾಗ ಎದುರಿಸಲು ಹೊಂದಿರುವ ಸಮರ್ಪಕ ಬಂಡವಾಳ ಅನುಪಾತವು (ಸಿಎಆರ್‌) ಕಳೆದ ವರ್ಷದ ಮಾರ್ಚ್‌ ಅಂತ್ಯಕ್ಕೆ ಶೇ 14.2ಕ್ಕೆ ಮುಟ್ಟಿರುವುದು ದಾಖಲೆಯಾಗಿದೆ. ಆರ್‌ಆರ್‌ಬಿಗಳ ವಿಲೀನಕ್ಕೆ ಕೇಂದ್ರವು 2004–05ರಲ್ಲಿ ಚಾಲನೆ ನೀಡಿ‌ತ್ತು. 196 ಬ್ಯಾಂಕ್‌ಗಳನ್ನು 2020–21ರಲ್ಲಿ 43ಕ್ಕೆ ಇಳಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.