ADVERTISEMENT

ಧಾನ್ಯಗಳಿಗೆ ತೆರಿಗೆ ಸದ್ಯಕ್ಕೆ ಬೇಡ: ಎಫ್‌ಕೆಸಿಸಿಐ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 13:44 IST
Last Updated 13 ಜುಲೈ 2022, 13:44 IST
ಧಾನ್ಯ
ಧಾನ್ಯ   

ಬೆಂಗಳೂರು: ಪ್ಯಾಕ್ ಮಾಡಿರುವ, ಲೇಬಲ್ ಇರುವ ಆಹಾರ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಶೇಕಡ 5ರಷ್ಟು ತೆರಿಗೆ ವಿಧಿಸುವ ಶಿಫಾರಸನ್ನು ತಕ್ಷಣಕ್ಕೆ ಅನುಷ್ಠಾನಗೊಳಿಸಬಾರದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಒತ್ತಾಯಿಸಿದೆ.

ಪ್ಯಾಕ್ ಮಾಡಿರುವ, ಲೇಬಲ್ ಇರುವ ಗೋಧಿ ಹಿಟ್ಟು ಸೇರಿದಂತೆ ಹಲವು ಆಹಾರ ವಸ್ತುಗಳನ್ನು ಶೇ 5ರ ತೆರಿಗೆ ವ್ಯಾಪ್ತಿಗೆ ತರಲು ಜಿಎಸ್‌ಟಿ ಮಂಡಳಿಯು ಈಚೆಗೆ ನಡೆದ ಸಭೆಯಲ್ಲಿ ಶಿಫಾರಸು ಮಾಡಿದೆ. ಇದು ಸೋಮವಾರದಿಂದ (ಜುಲೈ 18) ಜಾರಿಗೆ ಬರಬೇಕಿದೆ. ಜಿಎಸ್‌ಟಿ ಅಡಿಯಲ್ಲಿ ಈವರೆಗೆ ಬ್ರ್ಯಾಂಡೆಡ್ ಆಹಾರ ವಸ್ತುಗಳಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತಿತ್ತು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಐ.ಎಸ್. ಪ್ರಸಾದ್, ‘ಪ್ಯಾಕ್ ಮಾಡಿರುವ, ಲೇಬಲ್ ಅಂಟಿಸಿರುವ ಧಾನ್ಯಗಳಿಗೆ ತೆರಿಗೆ ವಿಧಿಸುವುದರಿಂದ ರೈತರಿಗೆ ಹಾಗೂ ವರ್ತಕರಿಗೆ ಅನಗತ್ಯ ಹೊರೆಯಾಗುತ್ತದೆ. ಹೀಗಾಗಿ, ಈ ತೆರಿಗೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವುದನ್ನು ಮುಂದಕ್ಕೆ ಹಾಕಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಆಹಾರ ವಸ್ತುಗಳ ಮೇಲಿನ ಈ ತೆರಿಗೆಯ ಸಾಧಕ, ಬಾಧಕ ಅಧ್ಯಯನ ನಡೆಸಿದ ನಂತರವಷ್ಟೇ ಅನುಷ್ಠಾನಕ್ಕೆ ತರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮೌಲ್ಯವರ್ಧಿತ ತೆರಿಗೆ ವ್ಯವಸ್ಥೆ ಇದ್ದಾಗ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇತ್ತು. ಈಗ ಧಾನ್ಯಗಳಿಗೆ ತೆರಿಗೆ ವಿಧಿಸುವುದರಿಂದ ಆಹಾರ ವಸ್ತುಗಳ ಮೇಲಿನ ಹಣದುಬ್ಬರದ ಮೇಲೆ ಯಾವ ಬಗೆಯ ಪರಿಣಾಮ ಉಂಟಾಗಬಹುದು ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಎಫ್‌ಕೆಸಿಸಿಐ ಪದಾಧಿಕಾರಿ ಬಿ.ಟಿ. ಮನೋಹರ್ ‘ಪ್ರಜಾವಾಣಿ’ಗೆ ವಿವರಿಸಿದರು.

ಪ್ಯಾಕ್ ಮಾಡಿರುವ, ಲೇಬಲ್ ಇರುವ ಎಷ್ಟು ತೂಕದ ಆಹಾರ ವಸ್ತುಗಳಿಗೆ ತೆರಿಗೆ ವಿಧಿಸಲಾಗುತ್ತದೆ, ನಿರ್ದಿಷ್ಟ ಪ್ರಮಾಣಕ್ಕಿಂತ ಕಡಿಮೆ ತೂಕದ ಪ್ಯಾಕ್‌ಗೆ ತೆರಿಗೆ ವಿನಾಯಿತಿ ಇರಲಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.