
ಬೆಂಗಳೂರು: ‘ದೇಶದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಲು ಕಾಲೇಜು ಶಿಕ್ಷಣ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಉದ್ಯಮದ ಬಗ್ಗೆ ಅರಿವು ನೀಡಿ, ಅವರನ್ನು ಉದ್ಯಮಿಗಳಾಗಿ ರೂಪಿಸುವ ಅಗತ್ಯವಿದೆ’ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಉನ್ನತ ಶಿಕ್ಷಣ ಇಲಾಖೆ ಮತ್ತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ‘ಎಫ್‌ಕೆಸಿಸಿಐನ ಇನ್ನೊ ಮಂಥನ್’ 18ನೇ ಆವೃತ್ತಿಗೆ ಅವರು ಸೋಮವಾರ ಚಾಲನೆ ನೀಡಿದರು.
‘ಮಂಥನ್’ ಕಾರ್ಯಕ್ರಮದ ಪ್ರಯೋಜನವು ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೂ ಲಭಿಸಬೇಕು ಎನ್ನುವ ಆಶಯದಿಂದ ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ಎಫ್‌ಕೆಸಿಸಿಐ ಜೊತೆ ಸಹಯೋಗ ಮಾಡಿಕೊಂಡಿದೆ. ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಉದ್ಯಮದ ಯೋಜನೆಯನ್ನು ಇದರಲ್ಲಿ ಪ್ರಸ್ತುತಪಡಿಸಬಹುದು. ಉತ್ತಮ ಯೋಜನೆಗಳಿಗೆ ₹25 ಲಕ್ಷದವರೆಗೆ ಬಹುಮಾನ ನೀಡಲಾಗುವುದು ಎಂದರು.
‘ರಾಜ್ಯದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ವಿದ್ಯಾರ್ಥಿಗಳು ತಮ್ಮಲ್ಲಿನ ಹೊಸ ಉದ್ಯಮ ಯೋಜನೆಯನ್ನು ಎಫ್‌ಕೆಸಿಸಿಐ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು’ ಎಂದು ‘ಇನ್ನೊ ಮಂಥನ್ 2026’ ಅಧ್ಯಕ್ಷ ಶ್ರವಣ್ ಗುಡುತ್ತೂರ್ ಹೇಳಿದರು.
ವಿದ್ಯಾರ್ಥಿಗಳು manthan.fkcci.orgಗೆ ಲಾಗಿನ್ ಆಗಿ, 2026ರ ಜನವರಿ 31ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಉದ್ಯಮದ ಯೋಜನೆ ಸಲ್ಲಿಸಲು ಏಪ್ರಿಲ್ 8 ಕೊನೆಯ ದಿನ. ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದರು.
‘ವಿದ್ಯಾರ್ಥಿಗಳು ಪದವಿ ಪಡೆದರಷ್ಟೇ ಸಾಲದು, ಅವರನ್ನು ಯಶಸ್ವಿ ಉದ್ಯಮಿಗಳನ್ನಾಗಿಸುವ ಉದ್ದೇಶವನ್ನು ಹೊಂದಲಾಗಿದೆ. ಮಂಥನ್‌ನಂತಹ ವೇದಿಕೆ ಇದಕ್ಕೆ ಅವಕಾಶ ಕಲ್ಪಿಸುತ್ತಿದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.