ADVERTISEMENT

50 ನಗರಗಳಿಗೆ ದಿನಸಿ ಸೇವೆ ವಿಸ್ತರಣೆ: ಫ್ಲಿಪ್‌ಕಾರ್ಟ್‌

ಪಿಟಿಐ
Published 3 ಮಾರ್ಚ್ 2021, 2:53 IST
Last Updated 3 ಮಾರ್ಚ್ 2021, 2:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಫ್ಲಿಪ್‌ಕಾರ್ಟ್‌ ಕಂಪನಿಯು ಕೋಲ್ಕತ್ತ, ಅಹಮದಾಬಾದ್‌ ಮತ್ತು ವೆಲ್ಲೂರು ಸೇರಿದಂತೆ 50ಕ್ಕೂ ಅಧಿಕ ನಗರಗಳಿಗೆ ತನ್ನ ದಿನಸಿ ಸೇವೆಯನ್ನು ವಿಸ್ತರಿಸಿದೆ. ಮುಂದಿನ ಆರು ತಿಂಗಳಿನಲ್ಲಿ ತನ್ನ ದಿನಸಿ ವ್ಯಾಪಾರವನ್ನು 70ಕ್ಕೂ ಅಧಿಕ ನಗರಗಳಿಗೆ ವಿಸ್ತರಣೆ ಮಾಡುವುದಾಗಿಯೂ ಅದು ಹೇಳಿದೆ.

ಈ ವಿಸ್ತರಣೆಯಿಂದಾಗಿ 7 ಮಹಾ ನಗರಗಳು ಮತ್ತು 40 ಕ್ಕೂ ಹೆಚ್ಚು ಸುತ್ತಮುತ್ತಲಿನ ನಗರಗಳಿಗೆ ಉತ್ತಮ ಗುಣಮಟ್ಟದ ದಿನಸಿ ಉತ್ಪನ್ನಗಳು ದೊರೆಯಲಿವೆ. ಅಲ್ಲದೇ, ಅತ್ಯುತ್ತಮವಾದ ಉಳಿತಾಯ ಮತ್ತು ಕೊಡುಗೆಗಳು, ತ್ವರಿತವಾಗಿ ವಿತರಣೆ ಹಾಗೂ ತಡೆರಹಿತವಾದ ದಿನಸಿ ಶಾಪಿಂಗ್ ಅನುಭವಗಳು ದೊರೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಸಿದೆ.

ಮಹಾ ನಗರಗಳಲ್ಲದೇ ಮೈಸೂರು, ವಾರಂಗಲ್, ಕಾನ್ಪುರ, ಅಲಹಾಬಾದ್, ಅಲಿಗಢ, ಜೈಪುರ, ಚಂಡೀಗಢ, ರಾಜ್‌ಕೋಟ್, ವಡೋದರ ನಗರಗಳಿಗೂ ಈ ಸೇವೆಯನ್ನು ಒದಗಿಸುತ್ತಿದೆ.

ADVERTISEMENT

‘ಬಳಕೆದಾರರಿಂದ ಗುಣಮಟ್ಟದ ಆಹಾರ ಮತ್ತು ಗೃಹೋಪಯೋಗಿ ಪೂರೈಕೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ದಿನಸಿ ವಿಭಾಗವು ಅತ್ಯಂತ ಹೆಚ್ಚು ಬೆಳವಣಿಗೆ ಹೊಂದುತ್ತಿರುವ ವಿಭಾಗದಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ದಿನಸಿ ಸೇವೆಗಳಿಗಾಗಿ ಹೂಡಿಕೆ ಪ್ರಮಾಣವನ್ನು ಹೆಚ್ಚು ಮಾಡಿದ್ದೇವೆ. ಕಳೆದ ಒಂದು ವರ್ಷದಲ್ಲಿ 2 ನೇ ಶ್ರೇಣಿಯ ನಗರಗಳಲ್ಲಿ ದಿನಸಿಗೆ ಬೇಡಿಕೆ ಹೆಚ್ಚಾಗಿರುವುದನ್ನು ಕಂಡಿದ್ದೇವೆ. ಮನೆಯಲ್ಲೇ ಇದ್ದುಕೊಂಡು ಗ್ರಾಹಕರು ಸಂಪರ್ಕರಹಿತವಾದ ಶಾಪಿಂಗ್‌ಗೆ ಆದ್ಯತೆ ನೀಡುತ್ತಿರುವುದು ಹೆಚ್ಚಾಗಿದೆ’ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ಮನಿಶ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.