ADVERTISEMENT

ಎಕ್ಸೈಸ್ ಸುಂಕ ಇಳಿಕೆ: ರಾಜ್ಯಗಳ ಪಾಲು ಇಳಿಕೆ ಇಲ್ಲ

ಪಿಟಿಐ
Published 22 ಮೇ 2022, 16:13 IST
Last Updated 22 ಮೇ 2022, 16:13 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್   

ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ತಗ್ಗಿಸಿರುವುದರಿಂದ ಕೇಂದ್ರದ ತೆರಿಗೆಯಿಂದ ರಾಜ್ಯಗಳಿಗೆ ಸಿಗುವ ಮೊತ್ತ ಇಳಿಕೆಯಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ನ ಪಾಲಿನಲ್ಲಿ ಈ ಕಡಿತವನ್ನು ಮಾಡಲಾಗಿದೆ. ಈ ಸೆಸ್ ಅಡಿಯಲ್ಲಿ ಸಂಗ್ರಹಿಸಲಾಗುವ ಮೊತ್ತವನ್ನು ಯಾವತ್ತಿಗೂ ರಾಜ್ಯಗಳ ಜೊತೆ ಹಂಚಿಕೊಳ್ಳುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕೇಂದ್ರವು ಎಕ್ಸೈಸ್ ಸುಂಕ ಕಡಿಮೆ ಮಾಡಿರುವುದರ ಪರಿಣಾಮವಾಗಿ ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳಿಗೆ ಸಿಗುವ ಪಾಲು ಇಳಿಕೆಯಾಗಲಿದೆ ಎಂದು ವಿರೋಧ ಪಕ್ಷಗಳು ಆರೋ‍ಪಿಸಿದ್ದವು.

‘ಮೂಲ ಎಕ್ಸೈಸ್ ಸುಂಕ (ಬಿಇಡಿ), ವಿಶೇಷ ಹೆಚ್ಚುವರಿ ಎಕ್ಸೈಸ್ ಸುಂಕ (ಎಸ್‌ಎಇಡಿ), ರಸ್ತೆ ಮತ್ತು ಮೂಲಸೌಕರ್ಯ ಸೆಸ್ (ಆರ್‌ಐಸಿ) ಹಾಗೂ ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೆಸ್ (ಎಐಡಿಸಿ) ಒಗ್ಗೂಡಿಸಿದಾಗ ಸಿಗುವ ಮೊತ್ತವೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕ. ಬಿಇಡಿಯನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಲಾಗುತ್ತದೆ. ಆದರೆ, ಎಸ್‌ಎಇಡಿ, ಆರ್‌ಐಸಿ ಮತ್ತು ಎಐಡಿಸಿಯನ್ನು ಹಂಚಿಕೊಳ್ಳುವುದಿಲ್ಲ’ ಎಂದು ನಿರ್ಮಲಾ ಅವರು ವಿವರಿಸಿದ್ದಾರೆ.

ADVERTISEMENT

2021ರ ನವೆಂಬರ್‌ನಲ್ಲಿ ‍ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಇಳಿಕೆ ಮಾಡಿದಾಗ ಕೂಡ, ಆರ್‌ಐಸಿ ಸೆಸ್‌ ತಗ್ಗಿಸಲಾಗಿತ್ತು. ಆಗಲೂ ರಾಜ್ಯಗಳಿಗೆ ಸಿಗುವ ಪಾಲು ಇಳಿಕೆ ಆಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ತೆರಿಗೆ ಹಂಚಿಕೆ ಸೂತ್ರ ಅನ್ವಯ, ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ಶೇಕಡ 41ರಷ್ಟು ಪಾಲು ರಾಜ್ಯಗಳಿಗೆ ಸಂದಾಯವಾಗುತ್ತದೆ. ಆದರೆ, ಸೆಸ್‌ ಮೂಲಕ ಸಂಗ್ರಹವಾಗುವ ಮೊತ್ತವು ರಾಜ್ಯಗಳಿಗೆ ಹೋಗುವುದಿಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯಲ್ಲಿ ಹೆಚ್ಚಿನ ಪಾಲು ಇರುವುದು ಸೆಸ್‌ನದ್ದು.

‘ಕೇಂದ್ರವು ಎಕ್ಸೈಸ್ ಸುಂಕವನ್ನು ₹ 1ರಷ್ಟು ಇಳಿಸಿದಾಗ, ರಾಜ್ಯಗಳಿಗೆ ಸಂದಾಯವಾಗುವ 41 ಪೈಸೆ ಕಡಿತವಾದಂತಾಗುತ್ತದೆ’ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಶನಿವಾರ ಹೇಳಿದ್ದರು. ನಂತರ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು, ‘ಸುಂಕ ಇಳಿಕೆಯ ಪೂರ್ತಿ ಹೊರೆಯು ಕೇಂದ್ರದ ಮೇಲೆಯೇ ಇದೆ’ ಎಂದು ಹೇಳಿದ್ದರು.

2014ರಿಂದ 2022ರವರೆಗಿನ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಭಿವೃದ್ಧಿ ಯೋಜನೆಗಳಿಗೆ ಮಾಡಿದ ವೆಚ್ಚವು ₹ 90.9 ಲಕ್ಷ ಕೋಟಿ ಎಂದು ನಿರ್ಮಲಾ ಅವರು ಆರ್‌ಬಿಐ ಅಂಕಿ–ಅಂಶ ಆಧರಿಸಿ ಹೇಳಿದ್ದಾರೆ.

‘ಆದರೆ, 2004ರಿಂದ 2014ರವರೆಗಿನ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೇವಲ ₹ 49.2 ಲಕ್ಷ ಕೋಟಿ ವೆಚ್ಚ ಮಾಡಲಾಗಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಇದುವರೆಗೆ ಆಹಾರ, ಇಂಧನ ಹಾಗೂ ರಸಗೊಬ್ಬರ ಮೇಲಿನ ಸಬ್ಸಿಡಿಗಾಗಿ ₹ 24.85 ಲಕ್ಷ ಕೋಟಿ ಖರ್ಚು ಮಾಡಲಾಗಿದೆ. ಬಂಡವಾಳ ಸೃಷ್ಟಿಗೆ ₹ 26.3 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ಯುಪಿಎ ಆಡಳಿತದ ಹತ್ತು ವರ್ಷಗಳಲ್ಲಿ ಸಬ್ಸಿಡಿಗಳಿಗಾಗಿ ₹ 13.9 ಲಕ್ಷ ಕೋಟಿ ಮಾತ್ರ ವಿನಿಯೋಗಿಸಲಾಗಿದೆ’ ಎಂದು ನಿರ್ಮಲಾ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.