ADVERTISEMENT

ವಿದೇಶಿ ವಿನಿಮಯ ಮೀಸಲು ₹90,200 ಕೋಟಿ ಹೆಚ್ಚಳ

ಪಿಟಿಐ
Published 9 ಡಿಸೆಂಬರ್ 2022, 15:34 IST
Last Updated 9 ಡಿಸೆಂಬರ್ 2022, 15:34 IST

ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಡಿಸೆಂಬರ್‌ 2ಕ್ಕೆ ಕೊನೆಗೊಂಡ ವಾರದಲ್ಲಿ ₹ 90,200 ಕೋಟಿ ಏರಿಕೆ ಕಂಡಿದ್ದು, ಒಟ್ಟಾರೆ ಮೀಸಲು ಸಂಗ್ರಹವು ₹ 46.01 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ತಿಳಿಸಿದೆ.

ಇದನ್ನೂ ಸೇರಿಸಿದರೆ, ಸತತ ನಾಲ್ಕನೇ ವಾರವೂ ಮೀಸಲು ಸಂಗ್ರಹ ಏರಿಕೆ ಆದಂತಾಗಿದೆ. ನವೆಂಬರ್‌ 11ಕ್ಕೆ ಕೊನೆಗೊಂಡ ವಾರದ ಬಳಿಕ ಮೀಸಲು ಸಂಗ್ರಹದ ಎರಡನೇ ಗರಿಷ್ಠ ಏರಿಕೆ ಇದಾಗಿದೆ. ನವೆಂಬರ್‌ 11ರಂದು ಮೀಸಲು ಸಂಗ್ರಹವು ₹ 1.20 ಲಕ್ಷ ಕೋಟಿಯಷ್ಟು ಏರಿಕೆ ಕಂಡಿತ್ತು.

ವಿದೇಶಿ ಕರೆನ್ಸಿಗಳ ಸಂಗ್ರಹವು ₹ 79,458 ಕೋಟಿಯಷ್ಟು ಏರಿಕೆ ಕಂಡು ₹ 40.75 ಲಕ್ಷ ಕೋಟಿಗೆ ಏರಿಕೆ ಆಗಿರುವುದು ಒಟ್ಟಾರೆ ಸಂಗ್ರಹದಲ್ಲಿ ಭಾರಿ ಏರಿಕೆಗೆ ಕಾರಣವಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ADVERTISEMENT

ಸಿಪ್‌ ಮೂಲಕ ದಾಖಲೆ ಹೂಡಿಕೆ

ನವದೆಹಲಿ (ಪಿಟಿಐ): ವ್ಯವಸ್ಥಿತ ಹೂಡಿಕೆ ಯೋಜನೆಗಳ (ಸಿಪ್‌) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ನವೆಂಬರ್‌ನಲ್ಲಿ ಸಾರ್ವಕಾಲಿಕ ದಾಖಲೆಯ ₹ 13,306 ಕೋಟಿ ಬಂಡವಾಳ ಹೂಡಿಕೆ ಆಗಿದೆ. ಹೂಡಿಕೆದಾರರಲ್ಲಿ ಪ್ರಬುದ್ಧತೆ ಮತ್ತು ವಿಶ್ವಾಸ ಹೆಚ್ಚಾಗುತ್ತಿರುವುದನ್ನು ಇದು ಸೂಚಿಸುತ್ತಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಶುಕ್ರವಾರ ತಿಳಿಸಿದೆ.

ಅಕ್ಟೋಬರ್‌ನಲ್ಲಿ ಸಿಪ್‌ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ₹ 13,041 ಕೋಟಿ ಹೂಡಿಕೆ ಆಗಿತ್ತು. ಮೇ ತಿಂಗಳಿನಿಂದ ಈಚೆಗೆ ಸಿಪ್‌ ಮೂಲಕ ₹ 12 ಸಾವಿರ ಕೋಟಿಗಿಂತಲೂ ಹೆಚ್ಚಿಗೆ ಬಂಡವಾಳ ಹೂಡಿಕೆ ಆಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಎಂಟು ತಿಂಗಳಿನಲ್ಲಿ ಒಟ್ಟಾರೆ ಒಳಹರಿವು ₹ 87,275 ಕೋಟಿ ಆಗಿದೆ.

ಈಕ್ವಿಟಿ ಎಂಎಫ್‌ನಲ್ಲಿ ಕುಸಿದ ಹೂಡಿಕೆ

ನವದೆಹಲಿ (ಪಿಟಿಐ): ಈಕ್ವಿಟಿ ಮ್ಯೂಚುವಲ್ ಫಂಡ್‌ ಯೋಜನೆಗಳಲ್ಲಿ ನವೆಂಬರ್ ತಿಂಗಳಿನಲ್ಲಿ ₹ 2,258 ಕೋಟಿ ಬಂಡವಾಳ ಹೂಡಿಕೆ ಆಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಶೇ 76ರಷ್ಟು ಕುಸಿತ ಕಂಡುಬಂದಿದೆ.

ಸತತ 21ನೇ ತಿಂಗಳಿನಲ್ಲಿಯೂ ಬಂಡವಾಳ ಹೊರಹರಿವು ಆಗಿದೆ. ಒಟ್ಟಾರೆಯಾಗಿ ಮ್ಯೂಚುವಲ್ ಫಂಡ್‌ ಉದ್ಯಮದಲ್ಲಿ ನವೆಂಬರ್‌ನಲ್ಲಿ ₹ 13,263 ಕೋಟಿ ಬಂಡವಾಳ ಹೂಡಿಕೆ ಆಗಿದೆ. ಅಕ್ಟೋಬರ್‌ನಲ್ಲಿ ಆಗಿದ್ದ ₹ 14,045 ಕೋಟಿಗೆ ಹೋಲಿಸಿದರೆ ತುಸು ಕಡಿಮೆ ಆಗಿದೆ ಎಂದು ಒಕ್ಕೂಟವು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.