ADVERTISEMENT

ದೇಶದ ಬಂಡವಾಳ ಮಾರುಕಟ್ಟೆಗಳಿಂದ ನಾಲ್ಕು ದಿನಗಳಲ್ಲಿ ₹13 ಸಾವಿರ ಕೋಟಿ ಹಿಂತೆಗೆತ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 14:31 IST
Last Updated 4 ಡಿಸೆಂಬರ್ 2025, 14:31 IST
   

ನವದೆಹಲಿ: ವಿದೇಶಿ ಹೂಡಿಕೆದಾರರು ದೇಶದ ಬಂಡವಾಳ ಮಾರುಕಟ್ಟೆಗಳಿಂದ ಒಟ್ಟು ₹13,121 ಕೋಟಿ ಬಂಡವಾಳವನ್ನು ನಾಲ್ಕು ದಿನಗಳಲ್ಲಿ (ಡಿಸೆಂಬರ್‌ 1ರಿಂದ 4ರವರೆಗೆ) ಹಿಂಪಡೆದಿದ್ದಾರೆ.

ಇದರಿಂದಾಗಿ, 2025ರಲ್ಲಿ ವಿದೇಶಿ ಹೂಡಿಕೆದಾರರು ಹಿಂಪಡೆದ ಒಟ್ಟು ಮೊತ್ತವು ₹1.56 ಲಕ್ಷ ಕೋಟಿಗೆ ಏರಿಕೆ ಕಂಡಂತೆ ಆಗಿದೆ ಎಂದು ಎನ್‌ಎಸ್‌ಡಿಎಲ್‌ನಲ್ಲಿ ಲಭ್ಯವಿರುವ ಅಂಕಿ–ಅಂಶಗಳು ಹೇಳುತ್ತಿವೆ.

ನವೆಂಬರ್‌ ತಿಂಗಳಲ್ಲಿ ವಿದೇಶಿ ಹೂಡಿಕೆದಾರರು ಒಟ್ಟು ₹3,765 ಕೋಟಿಯನ್ನು ಹಿಂಪಡೆದಿದ್ದರು. ಆದರೆ ಅಕ್ಟೋಬರ್‌ನಲ್ಲಿ ಅವರು ₹14,610 ಕೋಟಿಯಷ್ಟು ಬಂಡವಾಳವನ್ನು ಹೂಡಿಕೆ ಮಾಡಿದ್ದರು.

ADVERTISEMENT

ಜಾಗತಿಕ ಹೂಡಿಕೆದಾರರು ತಮ್ಮ ಹೂಡಿಕೆ ಮೊತ್ತವನ್ನು ವರ್ಷದ ಕೊನೆಯಲ್ಲಿ ಮರುಹೊಂದಾಣಿಕೆ ಮಾಡುವ ಕಾರಣದಿಂದಾಗಿ ಈ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಬಂಡವಾಳ ಹೊರಹೋಗಿದೆ ಎಂದು ಏಂಜಲ್ ಒನ್‌ ಬ್ರೋಕರೇಜ್ ಕಂಪನಿಯ ಹಿರಿಯ ವಿಶ್ಲೇಷಕ ವಕಾರ್‌ಜಾವೆದ್ ಖಾನ್ ಹೇಳಿದ್ದಾರೆ.

ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಕೂಡ ವಿದೇಶಿ ಹೂಡಿಕೆದಾರರನ್ನು ನಿರುತ್ತೇಜಿಸುವಂತೆ ಇದೆ. ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದ ವಿಳಂಬವಾಗುತ್ತಿರುವುದು ಹೂಡಿಕೆದಾರರ ಮೇಲೆ ಪರಿಣಾಮ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ.

ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ ದಾಖಲಿಸಿವೆ. ತಂತ್ರಜ್ಞಾನ ಮತ್ತು ಐ.ಟಿ. ವಲಯದ ಷೇರುಗಳ ಖರೀದಿಯು ಸೂಚ್ಯಂಕಗಳ ಏರಿಕೆಗೆ ನೆರವಾಗಿದೆ.