ADVERTISEMENT

₹ 1.4 ಲಕ್ಷ ಕೋಟಿ ಮೌಲ್ಯದ ಷೇರು ಖರೀದಿಸಿದ ವಿದೇಶಿ ಹೂಡಿಕೆದಾರರು

ಪಿಟಿಐ
Published 13 ಡಿಸೆಂಬರ್ 2020, 12:43 IST
Last Updated 13 ಡಿಸೆಂಬರ್ 2020, 12:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು ಈ ವರ್ಷದ ಡಿಸೆಂಬರ್‌ 11ರವರೆಗಿನ ವಹಿವಾಟಿನಲ್ಲಿ ಷೇರುಗಳ ಖರೀದಿ ಕಡೆಗೇ ಹೆಚ್ಚಿನ ಗಮನ ನೀಡಿದ್ದಾರೆ.

2020ರಲ್ಲಿ ₹ 1.4 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ, ₹ 1.07 ಲಕ್ಷ ಕೋಟಿ ಮೌಲ್ಯದ ಸಾಲಪತ್ರಗಳನ್ನು ಮಾರಾಟ ಮಾಡಿದ್ದಾರೆ.

2002ರ ಬಳಿಕ ಇದೇ ಮೊದಲ ಬಾರಿಗೆ ಷೇರುಪೇಟೆಯಲ್ಲಿ ಆಗಿರುವ ಗರಿಷ್ಠ ಮೊತ್ತದ ವಿದೇಶಿ ಹೂಡಿಕೆ ಇದಾಗಿದೆ. ಅಂತೆಯೇ 2002ರ ಬಳಿಕ ಇದೇ ಮೊದಲ ಬಾರಿಗೆ ಸಾಲಪತ್ರಗಳ ಮಾರುಕಟ್ಟೆಯಿಂದ ಗರಿಷ್ಠ ಮೊತ್ತದ ಹೊರಹರಿವು ಸಹ ಕಂಡುಬಂದಿದೆ.

ADVERTISEMENT

2020ನೇ ವರ್ಷವನ್ನೂ ಪರಿಗಣಿಸಿದರೆ ಒಟ್ಟಾರೆ ಐದು ಬಾರಿ ₹ 1 ಲಕ್ಷ ಕೋಟಿಗಿಂತಲೂ ಅಧಿಕ ಮೊತ್ತ ಹೂಡಿಕೆ ಆಗಿದೆ. ಹೆಚ್ಚುವರಿ ನಗದು ಲಭ್ಯತೆ, ಆಕರ್ಷಕ ಮೌಲ್ಯ ಹಾಗೂ ಡಾಲರ್ ದುರ್ಬಲವಾಗಿರುವ ಕಾರಣಗಳಿಂದಾಗಿ ವಿದೇಶಿ ಹೂಡಿಕೆದಾರರು ಭಾರತದ ಷೇರುಪೇಟೆಗಳಲ್ಲಿ ಈ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ.

ಹೂಡಿಕೆಯ ಪರಿಸ್ಥಿತಿಯಲ್ಲಿ ಬಹಳ ದೊಡ್ಡ ಮಟ್ಟದ ಬದಲಾವಣೆ ಕಂಡುಬರದ ಹೊರತು, ಮುಂದಿನ ಕೆಲವು ತಿಂಗಳುಗಳವರೆಗೆ ಇದೇ ರೀತಿಯಲ್ಲಿ ಬಂಡವಾಳ ಒಳಹರಿವು ಇರಲಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಕೋವಿಡ್‌–19ಕ್ಕೆ ಲಸಿಕೆ ಸಿಗುತ್ತಿರುವುದು ಭಾರತದ ದೃಷ್ಟಿಯಿಂದ ಪ್ರಯೋಜನಕಾರಿ. ಆರ್ಥಿಕತೆಯಲ್ಲಿ ಸುಧಾರಣೆ ಕಂಡುಬರುತ್ತಿರುವುದು ಸಹ ಹೂಡಿಕೆದಾರರನ್ನು ಭಾರತದೆಡೆಗೆ ಆಕರ್ಷಿಸುತ್ತಿದೆ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ಒಂದೊಮ್ಮೆ ಆರ್ಥಿಕತೆಯು ದೀರ್ಘಾವಧಿಯವರೆಗೆ ದುರ್ಬಲವಾಗಿದ್ದರೆ, ಎರಡನೇ ಹಂತದ ಕೊರೊನಾ ಅಲೆಯಿಂದಾಗಿ ಮತ್ತೊಮ್ಮೆ ಲಾಕ್‌ಡೌನ್‌ ಜಾರಿಗೊಳಿಸಬೇಕಾಗಿ ಬಂದರೆ ಹೂಡಿಕೆ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.