ADVERTISEMENT

ಅಕ್ಟೋಬರ್‌ನಲ್ಲಿ ₹14 ಸಾವಿರ ಕೋಟಿ ವಿದೇಶಿ ಹೂಡಿಕೆ

ಸತತ ಮೂರು ತಿಂಗಳಿನಿಂದ ಹೂಡಿಕೆ ಹಿಂಪಡೆಯುತ್ತಿದ್ದ ವಿದೇಶಿ ಹೂಡಿಕೆದಾರರ ನಿಲುವು ಬದಲು

ಪಿಟಿಐ
Published 2 ನವೆಂಬರ್ 2025, 19:31 IST
Last Updated 2 ನವೆಂಬರ್ 2025, 19:31 IST
<div class="paragraphs"><p>ವಿದೇಶಿ ನೇರ ಬಂಡವಾಳ ಹೂಡಿಕೆ </p></div>

ವಿದೇಶಿ ನೇರ ಬಂಡವಾಳ ಹೂಡಿಕೆ

   

ನವದೆಹಲಿ (ಪಿಟಿಐ): ಸತತ ಮೂರು ತಿಂಗಳುಗಳಿಂದ ದೇಶದ ಬಂಡವಾಳ ಮಾರುಕಟ್ಟೆಗಳಿಂದ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದ ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಅಕ್ಟೋಬರ್‌ ತಿಂಗಳಲ್ಲಿ ನಿವ್ವಳ ₹14,610 ಕೋಟಿ ಹೂಡಿಕೆ ಮಾಡಿದ್ದಾರೆ.

ದೇಶದ ಕಾರ್ಪೊರೇಟ್‌ ಕಂಪನಿಗಳ ವರಮಾನ ಗಳಿಕೆಯು ಚೆನ್ನಾಗಿ ಇರುವುದು, ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಇಳಿಕೆ ಮಾಡಿರುವುದು ಮತ್ತು ಭಾರತ–ಅಮೆರಿಕ ನಡುವೆ ವಾಣಿಜ್ಯ ಒಪ್ಪಂದವೊಂದು ಶೀಘ್ರವೇ ಸಾಧ್ಯವಾಗಬಹುದು ಎಂಬ ಆಶಾಭಾವನೆಯಲ್ಲಿ ಅವರು ಈ ಹೂಡಿಕೆ ಮಾಡಿದ್ದಾರೆ.

ADVERTISEMENT

ವಿದೇಶಿ ಹೂಡಿಕೆದಾರರು ಸೆಪ್ಟೆಂಬರ್‌ನಲ್ಲಿ ₹23,885 ಕೋಟಿ, ಆಗಸ್ಟ್‌ನಲ್ಲಿ ₹34,990 ಕೋಟಿ ಹಾಗೂ ಜುಲೈನಲ್ಲಿ ₹17,700 ಕೋಟಿ ಹೂಡಿಕೆಯನ್ನು ಹಿಂಪಡೆದಿದ್ದರು. ಅಕ್ಟೋಬರ್‌ ತಿಂಗಳಲ್ಲಿ ವಿದೇಶಿ ಹೂಡಿಕೆದಾರರ ನಿಲುವು ಬದಲಾಗಿದೆ. ಅಂದರೆ, ಜಾಗತಿಕ ಹೂಡಿಕೆದಾರರಿಗೆ ಭಾರತದ ಬಂಡವಾಳ ಮಾರುಕಟ್ಟೆಗಳ ಮೇಲೆ ಹೊಸದಾಗಿ ವಿಶ್ವಾಸ ಮೂಡಿದೆ.

ದೇಶದ ಷೇರುಪೇಟೆಗಳಲ್ಲಿ ಈಚೆಗೆ ಕಂಡುಬಂದ ಇಳಿಕೆ ಹಾಗೂ ಕಾರ್ಪೊರೇಟ್‌ ಕಂಪನಿಗಳು ಉತ್ತಮ ಫಲಿತಾಂಶ ತೋರಿರುವ ಕಾರಣದಿಂದಾಗಿ ದೇಶದ ಷೇರುಗಳ ಮೌಲ್ಯವು ಆಕರ್ಷಕವಾಗಿ ಕಾಣಲಾರಂಭಿಸಿದೆ. ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಗಳತ್ತ ಮತ್ತೆ ಮರಳಿರುವುದಕ್ಕೆ ಇದೂ ಒಂದು ಕಾರಣ ಎಂದು ಮಾರ್ನಿಂಗ್‌ಸ್ಟಾರ್‌ ಇನ್ವೆಸ್ಟ್‌ಮೆಂಟ್‌ ರಿಸರ್ಚ್‌ ಇಂಡಿಯಾ ಸಂಸ್ಥೆಯ ಸಂಶೋಧನಾ ನಿರ್ವಾಹಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ದೇಶದ ಅರ್ಥ ವ್ಯವಸ್ಥೆಯಲ್ಲಿನ ಸ್ಥಿರತೆ, ಜಾಗತಿಕ ಮಟ್ಟದಲ್ಲಿ ಪೂರಕ ಪರಿಸ್ಥಿತಿ ಹಾಗೂ ದೇಶದ ಕಾರ್ಪೊರೇಟ್‌ ಕಂಪನಿಗಳ ವರಮಾನದಲ್ಲಿ ಸ್ಥಿರತೆ ಕಂಡುಬಂದರೆ ಮುಂದಿನ ದಿನಗಳಲ್ಲಿಯೂ ವಿದೇಶಿ ಹೂಡಿಕೆದಾರರು ಹೂಡಿಕೆಯನ್ನು ಮುಂದುವರಿಸಬಹುದು ಎಂದು ಶ್ರೀವಾಸ್ತವ ಹೇಳಿದ್ದಾರೆ.

‘ಕಾರ್ಪೊರೇಟ್‌ ಕಂಪನಿಗಳ ವರಮಾನವು ಸುಧಾರಿಸಿದ ಸ್ಪಷ್ಟ ಲಕ್ಷಣಗಳು ಇವೆ. ಬೇಡಿಕೆಯಲ್ಲಿ ಉತ್ತಮ ಮಟ್ಟವು ಮುಂದುವರಿದರೆ ವರಮಾನವು ಇನ್ನಷ್ಟು ಹೆಚ್ಚಾಗುತ್ತದೆ. ಆಗ ಷೇರುಗಳ ಮೌಲ್ಯವು ಇನ್ನಷ್ಟು ಸಮಾಧಾನಕರವಾಗುತ್ತದೆ. ಹಾಗೆ ಆದಾಗ ವಿದೇಶಿ ಹೂಡಿಕೆದಾರರು ಹೂಡಿಕೆ ಮುಂದುವರಿಸುವ ಸಾಧ್ಯತೆ ಇದೆ’ ಎಂದು ಜಿಯೋಜಿತ್‌ ಇನ್ವೆಸ್ಟ್‌ಮೆಂಟ್ಸ್‌ ಸಂಸ್ಥೆಯ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.